ಸರಕಾರಿ ಭೂಮಿ ಒತ್ತುವರಿ ತೆರವು; ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಆಗ್ರಹ

ಬೆಂಗಳೂರು,ಜ.9: ಸರಕಾರಿ ಭೂಮಿ ಒತ್ತುವರಿ ತೆರವು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದ್ದಾರೆ.
ಶನಿವಾರ ಇಲ್ಲಿನ ಶಾಸಕರ ಭವನದಲ್ಲಿ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು, ನ್ಯಾಯಾಲಯ ಸ್ಥಾಪಿಸಲು ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿದೆ. ಈ ಸಂಬಂಧ ಜ.18ರೊಳಗಾಗಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕೋಳಿವಾಡ ನೇತೃತ್ವದ ಕೆರೆ ಒತ್ತುವರಿ ತಡೆ ಸದನ ಸಮಿತಿ ಬೆಂಗಳೂರಿನಲ್ಲಿ 10 ಸಾವಿರ ಎಕರೆ 1.50 ಲಕ್ಷ ರೂ.ವೌಲ್ಯದ ಕೆರೆ ಭೂಮಿ ಒತ್ತುವರಿಯಾಗಿದೆ ಎಂದು ವರದಿ ನೀಡಿದೆ. ಭೂ ಒತ್ತುವರಿ ಸಂಬಂಧ ನಾನೂ ವರದಿ ನೀಡಿದ್ದೆ ಆದರೆ, ವಿಶೇಷ ನ್ಯಾಯಾಲಯ ಸ್ಥಾಪನೆ ಆಗದೆ ಭೂ ಒತ್ತುವರಿದಾರರಿಗೆ ಶಿಕ್ಷೆ ಆಗುವುದಿಲ್ಲ. ಆದುದರಿಂದ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದ ಅವರು, ಭೂಗಳ್ಳರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ನೋಟಿಸ್ ನೀಡಿ ಕಾನೂನಿನ ಅನ್ವಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ವೆಚ್ಚಕ್ಕೆ ಮಿತಿ ಹೇರದ ಹಿನ್ನೆಲೆಯಲ್ಲಿ ಹಿರಿಯರ ಮನೆ, ಚಿಂತಕರ ಚಾವಡಿ ಎಂದೇ ಖ್ಯಾತಿಗಳಿಸಿದ್ದ ವಿಧಾನ ಪರಿಷತ್ತಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳು, ಬಂಡವಾಳಿಗರು ಬಂದು ಕೂರುತ್ತಿದ್ದಾರೆಂದು ಟೀಕಿಸಿದರು.





