ಕೆರೆಗೆ ಉರುಳಿದ ಜೀಪ್: 7 ಬಲಿ

ಹಾಸನ, ಜ.9: ಸ್ಕಾರ್ಪಿಯೊ ಜೀಪ್ ಕೆರೆಗೆ ಉರುಳಿ ಏಳು ಮಂದಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಳೆದ ರಾತ್ರಿ 1:30ರ ಸುಮಾರಿಗೆ ಶ್ರವಣಬೆಳಗೊಳದಲ್ಲಿ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆ ನಲ್ಲೂರು ಗ್ರಾಮದ ಸತೀಶ (25), ಮಂಡ್ಯ ಜಿಲ್ಲೆಯ ಶಿವಸ್ವಾಮಿ (23), ಮಂಡ್ಯ ಜಿಲ್ಲೆ ತಿಮ್ಮೇಗೌಡನ ದೊಡ್ಡಿಯ ಜಯಂತ್ (24), ಬೆಂಗಳೂರು ಮಾಗಡಿ ರಸ್ತೆಯಲ್ಲಿನ ಮಾಚುವಳ್ಳಿಯ ಜನಾರ್ದನ (24), ತುಮಕೂರು ಜಿಲ್ಲೆ ತುರುವೇಕೆರೆ ಕಪ್ಪೂರು ಗ್ರಾಮದ ಕಾರ್ತಿಕ್ (25), ರಾಮನಗರ ಜಿಲ್ಲೆ ಅಬ್ಬಿನಕುಪ್ಪೆಬಿಡದಿಯ ದಿಲೀಪ್ (24), ಹೊಳೆನರಸೀಪುರ ತಾಲೂಕಿನ ನಗರನಹಳ್ಳಿಯ ಎನ್.ಆರ್.ರಾಜು (25) ಮೃತಪಟ್ಟವರು.
ಘಟನೆಯಲ್ಲಿ ಪ್ರಶಾಂತ್, ರಘು ಹಾಗೂ ಚಾಲಕ ಪ್ರಸನ್ನ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಪ್ರವಾಸಕ್ಕೆಂದು ಬಂದಿದ್ದು, ಮೇಲುಕೋಟೆಗೆ ಹೋಗಿ ಚಿಕ್ಕಮಗಳೂರಿಗೆ ತೆರಳುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಶ್ರವಣಬೆಳಗೊಳದ ಬಳಿ ಇರುವ ಜನಿವಾರ ಕೆರೆಗೆ ಉರುಳಿದೆ. ಈ ವೇಳೆ ಜೀಪ್‌ನ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಹೊರಬಂದ ಚಾಲಕ ಇಬ್ಬರನ್ನು ರಕ್ಷಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





