ಸಂಸದರ ನಿಧಿ ಬಳಕೆ ಸಭೆಗೆ ಗೈರು; ವಿವರಣೆ ನೀಡುವಂತೆ ಸಿಎಸ್‌ಗೆ ಸಿಎಂ ಸೂಚನೆ

ಬೆಂಗಳೂರು, ಜ.8: ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಕರೆಯಲಾಗಿದ್ದ ಸಭೆಗೆ ಗೈರು ಹಾಜರಾದ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್‌ಗೆ ವಿವರಣೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಸದರ ನಿಧಿ ಬಳಕೆ ಕುರಿತು ಸಂಸದೀಯ ಸಮಿತಿ ಸಭೆ ನಿಗದಿಯಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಲೋಕಸಭೆಯ ಉಪಾಧ್ಯಕ್ಷ ಎಂ.ತಂಬಿದೊರೈ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಸಂಸದರು ಆಗಮಿಸಿದ್ದರು. ಆದರೆ, ಮುಖ್ಯ ಕಾರ್ಯದರ್ಶಿಯ ಗೈರು ಹಾಜರಿಯಿಂದಾಗಿ ಸಭೆಯನ್ನು ಮುಂಡೂಲಾಗಿತ್ತು.
ಶಿಷ್ಟಾಚಾರದಂತೆ ಲೋಕಸಭೆಯ ಉಪಾ ಧ್ಯಕ್ಷರ ನೇತೃತ್ವದ ಉನ್ನತಮಟ್ಟದ ಸಮಿತಿ ರಾಜ್ಯಕ್ಕೆ ಭೇಟಿ ನೀಡಿದಾಗ ರಾಜ್ಯದ ಸ್ಪೀಕರ್ ಅಥವಾಸಭಾಪತಿ ಹಾಜರಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿ ಸಮಿತಿಯನ್ನು ಸ್ವಾಗತಿಸಬೇಕು. ಆದರೆ, ಸಭೆಗೆ ಮುಖ್ಯಕಾರ್ಯದರ್ಶಿ ಗೈರು ಹಾಜರಾಗಿದ್ದರಿಂದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆಗೆ ಗೈರು ಹಾಜರಾಗಲು ಕಾರಣವೇನು ಎಂಬುದನ್ನು ತಿಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.







