ದಲಿತರಿಂದಲೇ ದಾರಿ ತಪ್ಪುತ್ತಿರುವ ಅಂಬೇಡ್ಕರ್‌ವಾದ: ಇಂದೂಧರ ಹೊನ್ನಾಪುರ ಆತಂಕ

ಬೆಂಗಳೂರು, ಜ. 9: ಜಾಗತೀಕರಣ, ಆಧುನೀಕರಣ ಮತ್ತು ಕೋಮುವಾದೀಕರಣದ ಫಲದಿಂದ ಬೌದ್ಧ ಧರ್ಮೀಯರು ತಮ್ಮ ಧರ್ಮವನ್ನು ಹಿಂದೂ ಧರ್ಮ, ನಮ್ಮ ಜಾತಿ ಹೊಲೆಯ, ಮಾದಿಗ ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕಸಾಪದಲ್ಲಿ ಲಡಾಯಿ ಪ್ರಕಾಶನ ಮತ್ತು ಬಯಲು ಬಳಗ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಬಿ.ಯು.ಸುಮಾ ರಚಿಸಿರುವ ‘ಸಂತೆಯೊಳಗೊಂದು ಮನೆ’ ಮತ್ತು ‘ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಅವಿರತ ಹೋರಾಟ ಮಾಡಿದ ಡಾ.ಬಿ.ಆರ್. ಅಂಬೇಡ್ಕರ್‌ರವರು ವೈದಿಕ ಜನಾಂಗದ ದಬ್ಬಾಳಿಕೆಗೆ ನುಲಿದಿದ್ದ ದಲಿತ ಜನಾಂಗಕ್ಕೆ ಧರ್ಮದ ನೆಲೆ ಒದಗಿಸಬೇಕು ಎಂದು ಚಿಂತಿಸಿದರು. ಈ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಆದರೆ ಅಂಬೇಡ್ಕರ್‌ರವರ ಆಶಯಗಳನ್ನು ಗಾಳಿಗೆ ತೂರಿ ಇಂದು ಅದೇ ಬೌದ್ಧ ಧರ್ಮಿಯರು ರಾಜಕೀಯ ಆಸೆ, ಆಮಿಷಗಳಿಗೆ ದಾಸರಾಗಿ ನಾವೂ ಹಿಂದೂ ಧರ್ಮದವರೆಂದೇ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಕಳೆದ 2011ರ ಜನಗಣತಿ ಪ್ರಕಾರ ಬೌದ್ಧ ಧರ್ಮದ ಜನಸಂಖ್ಯೆ ರಾಜ್ಯದಲ್ಲಿ 3 ಲಕ್ಷದಷ್ಟಿತ್ತು. ಆದರೆ ಇತ್ತೀಚಿಗೆ ರಾಜ್ಯ ಸರಕಾರದ ‘ಜಾತಿ ಸಮಿಕ್ಷೆ’ಯಲ್ಲಿ ಬೌದ್ಧ ಧರ್ಮಿಯರು ಕೇವಲ 75 ಸಾವಿರ ಮಂದಿಯಷ್ಟೇ ಇದ್ದಾರೆ ಎಂಬ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ ಎಂದು ಹೇಳಿದ ಅವರು, ಕೋಮುವಾದದ ಪರಿಣಾಮ ಮತ್ತು ಜಾತಿಯ ಹೆಸರಿನ ಲಾಭಕ್ಕಾಗಿ ಬೌದ್ಧ ಧರ್ಮಿಯರು ಇಂದು ನಾವೂ ಹೊಲೆಯ ಮಾದಿಗರೆಂದು ಸಮೀಕ್ಷೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದರು.
ಈ ಮೂಲಕ ದಲಿತರಿಗೆ ಧರ್ಮದ ನೆಲೆ, ಅಸ್ಮಿತೆಯ ಮಾರ್ಗವನ್ನು ಹಾಕಿಕೊಟ್ಟ ಅಂಬೇಡ್ಕರ್‌ರ ತದ್ವಿರುದ್ಧವಾಗಿ ತಮ್ಮ ನಿಲುವುಗಳನ್ನು ತಾಳುತ್ತಿದ್ದಾರೆ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು..
ಇನ್ನೊಂದು ಕಡೆ ದಲಿತ ಸಮುದಾಯದ ಒಳಜಾತಿಗಳಲ್ಲಿನ ಗಣ್ಯ ವ್ಯಕ್ತಿಗಳು ಸೇರಿದಂತೆ ಸಾಮಾನ್ಯರು ಕೂಡ ಮುಕ್ತವಾಗಿ ದಲಿತರೆಂದು ಗುರುತಿಸಿಕೊಳ್ಳದೇ ಇರುವುದು ದಲಿತ ಏಕತೆಗೆ ದೊಡ್ಡ ಹೊಡೆತವಾಗಿದೆ. ವಿಪರ್ಯಾಸವೇನೆಂದರೆ ದಲಿತರು ಅಂಬೇಡ್ಕರ್‌ರವರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಂಬೇಡ್ಕರ್‌ರನ್ನು ಕೋಮುವಾದಿಗಳು ಐಕಾನ್ ಆಗಿ ಮಾಡಿಕೊಂಡಿದ್ದಾರೆ ಎಂದು ಆತಂಕಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಸಿ.ಜಿ.ಲಕ್ಷ್ಮೀಪತಿ, ಡಾ.ಡಿ.ಡಾಮಿನಿಕ್, ಲೇಖಕಿ ಡಾ.ಬಿ.ಯು.ಸುಮಾ ಮತ್ತಿತರರು ಉಪಸ್ಥಿತರಿದ್ದರು.





