ಜ್ಞಾನದಾಹ ನೀಗಿಸುವ ‘ಪುಸ್ತಕ ಪರಿಷೆ’: ಕೇಂದ್ರ ಸಚಿವ ಅನಂತ ಕುಮಾರ್

ಬೆಂಗಳೂರು, ಜ. 9: ಉದ್ಯಾನನಗರಿ ಬೆಂಗಳೂರಿನಲ್ಲಿ ಎರಡು ದೊಡ್ಡ ‘ಪರಿಷೆ’ ನಡೆಯುತ್ತಿದ್ದು, ಒಂದು ಹೊಟ್ಟೆ ತುಂಬಿಸುವ ಕಡಲೆಕಾಯಿ ಪರಿಷೆ, ಮತ್ತೊಂದು ಜ್ಞಾನದಾಹ ನೀಗಿಸುವ ಪುಸ್ತಕ ಪರಿಷೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಶ್ಲಾಘಿಸಿದ್ದಾರೆ.
ಶನಿವಾರ ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೃಷ್ಟಿ ವೆಂಚರ್ಸ್ ಏರ್ಪಡಿಸಿದ್ದ ಎಂಟನೆ ಪುಸ್ತಕ ಪರಿಷೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಗುರುಗಳಾದ ಡಾ.ಸಿದ್ಧಲಿಂಗಯ್ಯ ಅವರ ಸಲಹೆಯನ್ವಯ ಅಲ್ಲಮ ಪ್ರಭು ಅವರ ವಚನ ಪುಸ್ತಕವನ್ನು ಖರೀದಿಸಿದ್ದೇನೆ. ಪುಸ್ತಕ ಪರಿಷೆ ಆಯೋಜನೆ ಒಳ್ಳೆಯ ಪ್ರಯತ್ನ ಎಂದು ಬಣ್ಣಿಸಿದರು.
ಓದುವ ಅಭಿರುಚಿ, ಪುಸಕ್ತ ಪ್ರೇಮ ಬೆಳೆಸುವ ಪುಸ್ತಕ ಪರಿಷೆಗೆ ಭೇಟಿ ನೀಡುವ ಎಲ್ಲರಿಗೂ ಒಂದು ಪುಸಕ್ತವನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶ ಕಲ್ಪಿಸಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಈ ಪರಿಷೆ ಅನುಕೂಲವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ ಮಾತನಾಡಿ, ಸೃಷ್ಟಿ ವೆಂಚರ್ಸ್ ಸಂಸ್ಥೆ ಎಂಟು ವರ್ಷಗಳಿಂದ ಯಶಸ್ವಿಯಾಗಿ ಪುಸ್ತಕ ಪರಿಷೆಯನ್ನು ನಡೆಸುತ್ತಾ ಬಂದಿದ್ದು, ಇಂತಹ ಪರಿಷೆಗಳು ಜನರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸುತ್ತವೆ. ಈ ಪರಿಷೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಪುಸಕ್ತ ಖರೀದಿಸುತ್ತಿರುವುದು ಶ್ಲಾಘನೀಯ ಎಂದರು.
ಪುಸ್ತಕ ಪರಿಷೆಯಲ್ಲಿ ಈ ವರ್ಷ ಕನಿಷ್ಠ 50 ಲಕ್ಷ ಪುಸ್ತಕ ಮಾರಾಟ ಮಾಡುವ ನಿರೀಕ್ಷೆಯಿದ್ದು, ಒಂದು ಕೋಟಿ ಪುಸ್ತಕಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ನಗರದ ಬೇರೆ-ಬೇರೆ ಸ್ಥಳಗಳಲ್ಲಿ ಈ ರೀತಿ ಪುಸ್ತಕ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ನಾಗರಾಜ್ ತಿಳಿಸಿದರು.





