ಸಾನಿಯಾ-ಮಾರ್ಟಿನಾ ಮುಡಿಗೆ ಬ್ರಿಸ್ಬೇನ್ ಡಬಲ್ಸ್ ಕಿರೀಟ

ಬ್ರಿಸ್ಬೇನ್ ಇಂಟರ್‌ನ್ಯಾಶನಲ್
ಬ್ರಿಸ್ಬೇನ್, ಜ.9: ಹೊಸ ಋತುವಿನಲ್ಲೂ ಪ್ರಚಂಡ ಪ್ರದರ್ಶನವನ್ನು ಮುಂದುವರಿಸಿದ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಡಬ್ಲು ಟಿಎ ಬ್ರಿಸ್ಬೇನ್ ಟ್ರೋಫಿಯನ್ನು ಜಯಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜೋಡಿ ಸಾನಿಯಾ ಹಾಗೂ ಹಿಂಗಿಸ್ ಜರ್ಮನಿಯ ವೈಲ್ಡ್‌ಕಾರ್ಡ್ ಆಟಗಾರ್ತಿಯರಾದ ಆ್ಯಂಜೆಲಿಕ್ ಕರ್ಬರ್ ಹಾಗೂ ಆ್ಯಂಡ್ರಿಯ ಪೆಟ್ಕೊವಿಕ್‌ರನ್ನು 69 ನಿಮಿಷಗಳ ಹೋರಾಟದಲ್ಲಿ 7-5, 6-1 ಸೆಟ್‌ಗಳಿಂದ ಮಣಿಸಿದರು.
ವಿಶ್ವದ ನಂ.1 ಜೋಡಿ ಸಾನಿಯಾ ಹಾಗೂ ಮಾರ್ಟಿನಾ ಸತತ 26ನೆ ಪಂದ್ಯವನ್ನು ಜಯಿಸುವ ಮೂಲಕ ಸತತ ಆರನೆ ಪ್ರಶಸ್ತಿಯನ್ನು ಜಯಿಸಿತು. ಈ ಜೋಡಿ ಯುಎಸ್ ಓಪನ್, ಗ್ವಾಂಗ್‌ಝೌ, ವುಹಾನ್, ಬೀಜಿಂಗ್, ಡಬ್ಲುಟಿಎ ಫೈನಲ್ಸ್ ಹಾಗೂ ಇದೀಗ ಬ್ರಿಸ್ಬೇನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಸತತ 26ನೆ ಪಂದ್ಯವನ್ನು ಜಯಿಸಿರುವ ಸಾನಿಯಾ ಹಾಗೂ ಮಾರ್ಟಿನಾ 2012ರಲ್ಲಿ ಸತತ 25 ಪಂದ್ಯಗಳನ್ನು ಜಯಿಸಿ ಸತತ ಐದು ಪ್ರಶಸ್ತಿಗಳನ್ನು ಜಯಿಸಿದ್ದ ಇಟಲಿಯ ಸಾರಾ ಇರ್ರಾನಿ ಹಾಗೂ ರಾಬರ್ಟ ವಿನ್ಸಿ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿ ಹೊಸ ದಾಖಲೆ ಬರೆದಿದ್ದಾರೆ.
ಫೆಡರರ್ ಹ್ಯಾಟ್ರಿಕ್ ಫೈನಲ್‌ಗೆ
ಬ್ರಿಸ್ಬೇನ್, ಜ.9: ಸ್ವಿಸ್ ಮಾಂತ್ರಿಕ ರೋಜರ್ ಫೆಡರರ್ ಸತತ ಮೂರನೆ ಬಾರಿ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಫೈನಲ್‌ಗೆ ತಲುಪಿದ್ದಾರೆ.
ಫೆಡರರ್ ಶನಿವಾರ ಏಕಪಕ್ಷೀಯವಾಗಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 8ನೆ ಶ್ರೇಯಾಂಕದ ಆಸ್ಟ್ರೀಯ ಆಟಗಾರ ಡೊಮಿನಿಕ್ ಥಿಯೆಮ್ ವಿರುದ್ಧ 6-1, 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.
17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಕೇವಲ 60 ನಿಮಿಷದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರು. ಕೇವಲ 22 ನಿಮಿಷದಲ್ಲಿ ಮೊದಲ ಸೆಟ್‌ನ್ನು ವಶಪಡಿಸಿಕೊಂಡ 34ರ ಹರೆಯದ ಫೆಡರರ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.
ಮೂರನೆ ಬಾರಿ ಫೈನಲ್‌ಗೆ ತಲುಪಿರುವ ಫೆಡರರ್ 2014ರಲ್ಲಿ ಫೈನಲ್‌ನಲ್ಲಿ ಲೆಟನ್ ಹೆವಿಟ್ ವಿರುದ್ಧ ಶರಣಾಗಿದ್ದರು. ಕಳೆದ ವರ್ಷ ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಫೆಡರರ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ರಾವೊನಿಕ್‌ರನ್ನು ಮತ್ತೊಮ್ಮೆ ಎದುರಿಸಲಿದ್ದು, ಇದು 2015ರ ಫೈನಲ್‌ನ ಪುನರಾವರ್ತನೆಯಾಗಲಿದೆ.
ಪುರುಷರ ಸಿಂಗಲ್ಸ್‌ನ ಮತ್ತೊಂದು ಸೆಮಿಫೈನಲ್‌ನಲ್ಲಿ ರಾವೊನಿಕ್ ಅವರು ಆಸ್ಟ್ರೇಲಿಯದ ಬೆರ್ನಾರ್ಡ್ ಟಾಮಿಕ್‌ರನ್ನು ಒಂದು ಗಂಟೆ, 47 ನಿಮಿಷಗಳ ಹೋರಾಟದಲ್ಲಿ 7-6(7/5), 7-6(7/5) ಸೆಟ್‌ಗಳಿಂದ ಮಣಿಸಿದರು.
ವಿಕ್ಟೋರಿಯ ಮುಡಿಗೆ ಸಿಂಗಲ್ಸ್ ಕಿರೀಟ
ಬ್ರಿಸ್ಬೇನ್, ಜ.9: ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಬೆಲಾರಿಸ್ ಆಟಗಾರ್ತಿ ಅಝರೆಂಕಾ ಅವರು ಜರ್ಮನಿಯ ನಾಲ್ಕನೆ ಶ್ರೇಯಾಂಕದ ಆಟಗಾರ್ತಿ ಆ್ಯಂಜೆಲಿಕ್ ಕರ್ಬರ್‌ರನ್ನು 6-3, 6-1 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.
ಈ ಪ್ರಶಸ್ತಿಯು ಅಝರೆಂಕಾಗೆ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ಗೆ ಮೊದಲು ಲಭಿಸಿದ ಉಡುಗೊರೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಅಝರೆಂಕಾ ಸತತ ಮೂರನೆ ಬಾರಿ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸುವ ವಿಶ್ವಾಸದಲ್ಲಿದ್ದಾರೆ. 2012 ಹಾಗೂ 2013ರಲ್ಲಿ ಸತತ ಪ್ರಶಸ್ತಿಯನ್ನು ಜಯಿಸಿದ್ದ ಅಝರೆಂಕಾ ಎರಡು ಬಾರಿ ಯುಎಸ್ ಓಪನ್‌ನಲ್ಲಿ ಫೈನಲ್ ತಲುಪಿದ್ದರು. ಆದರೆ, ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು.
ಕರ್ಬರ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಅಝರೆಂಕಾ ಎರಡನೆ ಬಾರಿ ಬ್ರಿಸ್ಬೇನ್ ಕಿರೀಟ ಧರಿಸಿದರು. 26ರ ಹರೆಯದ ಅಝರೆಂಕಾ 2009ರಲ್ಲಿ ಕೊನೆಯ ಬಾರಿ ಬ್ರಿಸ್ಬೇನ್ ಪ್ರಶಸ್ತಿ ಜಯಿಸಿದ್ದರು.
2013ರ ನಂತರ ಅಝರೆಂಕಾ ಜಯಿಸಿರುವ ಮೊದಲ ಪ್ರಶಸ್ತಿ ಇದಾಗಿದೆ. ಮರಿಯಾ ಶರಪೋವಾ, ಸಿಮೊನಾ ಹಾಲೆಪ್ ಹಾಗೂ ಗಾರ್ಬೈನ್ ಮುಗುರುಝ ಟೂರ್ನಿಯಿಂದ ಹಿಂದೆ ಸರಿದ ಕಾರಣ ಕರ್ಬರ್ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿ ಟೂರ್ನಿ ಪ್ರವೇಶಿಸಿದ್ದರು.







