ಅಫ್ಘಾನ್ ಶಾಂತಿ ಪ್ರಕ್ರಿಯೆ: ನಾಳೆ 4ರಾಷ್ಟ್ರಗಳ ಸಭೆ
ಇಸ್ಲಾಮಾಬಾದ್,ಜ.9: ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಸರಕಾರದ ನಡುವೆ ಮಾತುಕತೆ ನಡೆಸುವ ಬಗ್ಗೆ ಒಮ್ಮತ ಸಾಧಿಸುವ ನಿಟ್ಟಿನಲ್ಲಿ ಚರ್ಚಿಸುವ ಉದ್ದೇಶದಿಂದ ನಾಲ್ಕು ರಾಷ್ಟ್ರಗಳ ಪ್ರತಿನಿಧಿಗಳ ಸಭೆ ಪಾಕ್ ನೇತೃತ್ವದಲ್ಲಿ ಸೋಮವಾರ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಲವು ದಶಕಗಳ ಕಾಲ ಮುಂದುವರಿದಿದ್ದ ರಕ್ತಪಾತದ ಬಳಿಕ ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ನಾಲ್ಕು ರಾಷ್ಟ್ರಗಳ ಗುಂಪೊಂದನ್ನು ಕಳೆದ ವರ್ಷ ರಚಿಸಲಾಗಿತ್ತು.
‘‘ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಹಾಗೂ ಅಮೆರಿಕದ ಪ್ರತಿನಿಧಿಗಳು ಈ ಪೂರ್ವಭಾವಿ ಮಾತುಕತೆಯಲ್ಲಿ ಪಾಲ್ಗೊಳ್ಳಲಿವೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಸರ್ತಾಜ್ ಅಝೀಝ್(ಪಾಕಿಸ್ತಾನ), ಸಹಾಯಕ ವಿದೇಶಾಂಗ ಸಚಿವ ಹಕ್ಮತ್ ಖಲೀಲ್ ಕರ್ಝಾಯಿ(ಅಫ್ಘಾನಿಸ್ತಾನ) ಮತ್ತು ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶಗಳಿಗಾಗಿರುವ ಚೀನಾ ಹಾಗೂ ಅಮೆರಿಕದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕು ರಾಷ್ಟ್ರಗಳು ಮಾತುಕತೆಗೆ ವೇದಿಕೆಯೊಂದನ್ನು ನಿರ್ಮಿಸಲಿದೆಯಲ್ಲದೆ ಎರಡನೆ ಸುತ್ತಿನ ಸಂಧಾನದ ಕಾರ್ಯಸೂಚಿಯೊಂದನ್ನು ಸಿದ್ಧಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.