ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ತವರು ರಾಷ್ಟ್ರದಲ್ಲಿ ತರಬೇತಿ
ವಾಷಿಂಗ್ಟನ್, ಜ.9: ಉನ್ನತ ಮಟ್ಟದ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಈ ವರ್ಷ ಭಾರತದಲ್ಲೇ ಇರುವ 23 ಕಾರ್ಪೊರೇಟ್ ಸಂಸ್ಥೆಗಳು ತರಬೇತಿ (ಇಂಟರ್ನ್‌ಶಿಪ್)ಗೆ ಅವಕಾಶ ಒದಗಿಸಲಿವೆ ಎಂದು ವರದಿಯೊಂದು ತಿಳಿಸಿದೆ.
ಅಪೋಲೊ ಹಾಸ್ಪಿಟಲ್ಸ್, ಬ್ಲೂ ಸ್ಟಾರ್, ಫ್ಲಿಪ್‌ಕಾರ್ಟ್, ಫೋರ್ಬ್ಸ್ ಮಾರ್ಶಲ್, ಗಾದ್ರೆಜ್, ಇನ್ಫೊಸಿಸ್, ಕಿರ್ಲೋಸ್ಕರ್ ಬ್ರದರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಇಂಟರ್‌ನ್ಯಾಶನಲ್, ಟಾಟಾ ಟ್ರಸ್ಟ್, ಟ್ರೆಂಟ್, ವಿಪ್ರೊ ಮುಂತಾದ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಕಿರುಅವಧಿಯ ತರಬೇತಿಗಳನ್ನು ನೀಡಲಿವೆ.
ಈ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ತಮ್ಮ ತವರು ರಾಷ್ಟ್ರದೊಂದಿಗಿನ ಸಂಪರ್ಕವನ್ನು ಭದ್ರಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಭಾವಿಸಲಾಗಿದೆ.
‘ಇಂಡಿಯಾ ಕಾರ್ಪೊರೇಟ್ ಇಂಟರ್ನ್‌ಶಿಪ್’ ಉಪಕ್ರಮದಡಿ ಈ ಅವಕಾಶ ಕಲ್ಪಿಸಲಾಗಿದೆ.
ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ 2016ರ ಬೇಸಿಗೆಯಲ್ಲಿ 2ರಿಂದ 6 ತಿಂಗಳ ಅವಧಿಯ ತರಬೇತಿಗಳು ಪ್ರಾರಂಭಗೊಳ್ಳಲಿವೆ. ‘‘ಹೊಸ ಉಪಕ್ರಮವು ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ಉನ್ನತ ಕಂಪೆನಿಗಳಲ್ಲಿ ಬಹುಸಾಂಸ್ಕೃತಿಕ ಪರಿಸರ ಹಾಗೂ ಭಾರತದ ಮೂಲದೊಂದಿಗೆ ಬೆಸೆಯುವುದರೊಂದಿಗೆ ಜಾಗತಿಕ ದುಡಿಮೆ ಸಂಸ್ಕೃತಿಯನ್ನು ಪರಿಚಯಿಸಲಿದೆ ಎಂದು ‘ಓವರ್‌ಸೀಸ್ ಇಂಡಿಯನ್ ಫೆಸಿಲಿಟೇಶನ್ ಸೆಂಟರ್’(ಒಐಎಫ್‌ಸಿ) ಹೇಳಿಕೆಯೊಂದರಲ್ಲಿ ವಿವರಿಸಿದೆ. ಭಾರತೀಯ ಸಾಗರೋತ್ತರ ವ್ಯವವಹಾರಗಳ ಸಚಿವಾಲಯ (ಎಂಒಐಎ)ದಿಂದ ಸ್ಥಾಪಿಸಲ್ಪಟ್ಟಿರುವ ಒಐಎಫ್‌ಸಿ, ಕನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಭಾಗಿತ್ವದೊಂದಿಗೆ ಹೊಸ ಉಪಕ್ರಮವನ್ನು ಕಳೆದ ನವೆಂಬರ್‌ನಲ್ಲಿ ಲಾಸ್‌ಏಂಜಲೀಸ್‌ನಲ್ಲಿ ಏರ್ಪಡಿಸಲಾಗಿದ್ದ ವಾಣಿಜ್ಯ ಸಭೆಯಲ್ಲಿ ಚಾಲನೆಗೊಳಿಸಿತ್ತು.