ಭಾರತ, ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಸಭೆ ಜ.15ಕ್ಕೆ’
ಇಸ್ಲಾಮಾಬಾದ್, ಜ.9: ಪಠಾಣ್‌ಕೋಟ್ ದಾಳಿಯ ಹಿನ್ನೆಲೆಯಲ್ಲಿ ನಿಗದಿತ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯ ಅನಿಶ್ಚಿತತೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಳು ಜನವರಿ 15ರಂದು ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.
ಸಂಸತ್‌ನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವೇಳೆ ಪಾಕ್ ಪ್ರಧಾನಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್ ಈ ಹೇಳಿಕೆ ನೀಡಿದ್ದಾರೆ.
ಹೊಸದಾಗಿ ಒಪ್ಪಿಕೊಳ್ಳಲಾಗಿರುವ ‘ಸಮಗ್ರ ದ್ವಿಪಕ್ಷೀಯ ಮಾತುಕತೆ’ಯಡಿ ವಿವಿಧ ಸಭೆಗಳ ನಿಗದಿತ ವೇಳಾಪಟ್ಟಿಯನ್ನು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ನಿರ್ಧರಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಇತರ ಪ್ರಮುಖ ವಿಷಯಗಳ ಜೊತೆಗೆ ಕಾಶ್ಮೀರ ವಿಷಯವೂ ದ್ವಿಪಕ್ಷೀಯ ಮಾತುಕತೆಗಳ ಪ್ರಮುಖ ಭಾಗವಾಗಲಿದೆ ಎಂದು ಸರ್ತಾಜ್ ಅಝೀಝ್ ಹೇಳಿದ್ದಾರೆ.
ಪಾಕ್ ಅಂಗಳಕ್ಕೆ ಚೆಂಡನ್ನು ಸರಿಸಿರುವ ಭಾರತವೂ ಈಗಾಗಲೇ ಹೇಳಿಕೆಯೊಂದನ್ನು ನೀಡಿ, ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದ ಇಸ್ಲಾಮಾಬಾದ್ ಕೈಗೊಳ್ಳುವ ಸೂಕ್ತ ಹಾಗೂ ನಿರ್ಣಾಯಕ ಕ್ರಮವನ್ನು ಆಧರಿಸಿ ವಿದೇಶಾಂಗ ಕಾರ್ಯದರ್ಶಿಗಳ ಮಾತುತಕೆಯ ಬಗ್ಗೆ ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ತಿಳಿಸಿತ್ತು.