ಬ್ರಿಟನ್ ವೆಬ್‌ಸೈಟ್‌ನಿಂದ ನೇತಾಜಿ ವಿಮಾನ ದುರಂತ ಪ್ರಕರಣದ ಪ್ರತ್ಯಕ್ಷದರ್ಶಿ ಹೇಳಿಕೆ ಬಿಡುಗಡೆ
ಲಂಡನ್, ಜ.9: ನೇತಾಜಿ ಸುಭಾಶ್ಚಂದ್ರ ಬೋಸರ ಕೊನೆಯ ದಿನಗಳ ಬಗ್ಗೆ ದಾಖಲಿಸಿಕೊಳ್ಳಲು ರೂಪಿಸಲಾಗಿರುವ ಬ್ರಿಟನ್‌ನ ವೆಬ್‌ಸೈಟೊಂದು, 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ವಿಮಾನ ದುರಂತದಲ್ಲಿ ನೇತಾಜಿ ಸಾವಿಗೀಡಾಗಿದ್ದರೆನ್ನಲಾಗಿರುವ ವರದಿಗೆ ಸಂಬಂಧಿಸಿ ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ತಾನು ಬಿಡುಗಡೆಗೊಳಿಸಿರುವುದಾಗಿ ಹೇಳಿಕೊಂಡಿದೆ.
ವಿಮಾನ ದುರಂತಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಹಲವು ಮಂದಿ ಭಾಗಿಗಳಾಗಿದ್ದು, ಇಬ್ಬರು ಬ್ರಿಟಿಷ್ ಬೇಹುಗಾರಿಕೆ ಅಧಿಕಾರಿಗಳು ಕೂಡಾ ಸತ್ಯಾಂಶವನ್ನು ದಾಖಲಿಸಿಕೊಳ್ಳಲು ದುರಂತದ ಸ್ಥಳಕ್ಕೆ ಮರುಭೇಟಿ ನೀಡಿದ್ದರು ಎಂದು ವೆಬ್‌ಸೈಟ್ ವಿವರಿಸಿದೆ. ಇಂತಹ ದುರಂತವೊಂದು ಸಂಭವಿಸಿದ್ದಿರಬಹುದೆ ಎಂಬುದರ ಬಗ್ಗೆ ಕೆಲವು ವಲಯಗಳಲ್ಲಿ ಕಳೆದ 70 ವರ್ಷಗಳಿಂದಲೂ ಸಂದೇಹಗಳಿದ್ದವು. ನಾಲ್ಕು ಪ್ರತ್ಯೇಕ ವರದಿಗಳು ಕೂಡಾ ದ್ವಂದ್ವವನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಬಲ ಸಾಕ್ಷಿಗಳಾಗಿವೆ ಎಂದು ಬೋಸ್‌ಫೈಲ್ಸ್ ಡಾಟ್‌ಕಾಂ ತಿಳಿಸಿದೆ.
ನೇತಾಜಿಯವರ ಸಾಯುವ ಸಂದರ್ಭದಲ್ಲಿ ಅವರ ಕೊನೆಯ ಮಾತು ಏನಾಗಿತ್ತೆಂಬುದರ ಬಗ್ಗೆಯೂ ವೆಬ್‌ಸೈಟ್ ಬೆಳಕು ಚೆಲ್ಲಿದ್ದು, ಭಾರತದ ಸ್ವಾತಂತ್ರವೇ ಅವರ ಪರಮ ಗುರಿಯಾಗಿತ್ತೆಂಬುದನ್ನು ದಾಖಲೆಗಳು ಪ್ರತಿಬಿಂಬಿಸಿವೆ.
‘‘1945ರ ಆಗಸ್ಟ್ 18ರಂದು ಜಪಾನ್‌ನ ವಾಯುಪಡೆಯ ಬಾಂಬ್ ವಿಮಾನವು ಬೋಸ್ ಹಾಗೂ 12-13 ಮಂದಿ ಸಿಬ್ಬಂದಿಯೊಂದಿಗೆ ಟೊರೇನ್‌ನಿಂದ ವಿಯೆಟ್ನಾಂಗೆ ತೆರಳಿತ್ತು. 1956ರಲ್ಲಿ ಭಾರತ ಸರಕಾರವು ಬೋಸ್‌ರ ಐಎನ್‌ಎಯ ಮೇಜರ್ ಜನರಲ್ ಆಗಿದ್ದ ಶಾ ನವಾಝ್ ಖಾನ್ ನೇತೃತ್ವದಲ್ಲಿ ನೇಮಿಸಲ್ಪಟ್ಟಿದ್ದ ತ್ರಿಸದಸ್ಯ ನೇತಾಜಿ ತನಿಖಾ ಸಮಿತಿಗೆ ದೊರೆತ ಮಾಹಿತಿಯಂತೆ ವಿಮಾನ ಹಾರಾಟದ ವೇಳೆ ಹವಾಮಾನ ಅನುಕೂಲಕರವಾಗಿದ್ದು, ಎಂಜಿನ್‌ಗಳು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು’’ ಎಂದು ವೆಬ್‌ಸೈಟ್ ವಿವರಿಸಿದೆ.