ವಾಯುನೆಲೆ ಸುರಕ್ಷಿತ: ಉಗ್ರರು ಅಡಗಿಲ್ಲ; ಭದ್ರತಾ ಪಡೆಗಳಿಂದ ಘೋಷಣೆ
ಪಠಾಣ್‌ಕೋಟ್, ಜ. 9: ಮೂರು ದಿನಗಳ ಬೃಹತ್ ಶೋಧ ಕಾರ್ಯಾಚರಣೆಯ ಬಳಿಕ ಅಂತಿಮವಾಗಿ ಶುಕ್ರವಾರ ತಡರಾತ್ರಿಯ ವೇಳೆಗೆ, ಪಠಾಣ್‌ಕೋಟ್ ವಾಯುಪಡೆ ನೆಲೆ ಭದ್ರವಾಗಿದೆ ಎಂಬುದಾಗಿ ಭದ್ರತಾ ಪಡೆಗಳು ಘೋಷಿಸಿವೆ.
ಪಠಾಣ್‌ಕೋಟ್‌ಗೆ ಹೊಂದಿ ಕೊಂಡಿರುವ ಗುರುದಾಸ್‌ಪುರ ಜಿಲ್ಲೆಯಲ್ಲೂ ಶಂಕಿತ ವ್ಯಕ್ತಿಗಳಿಗಾಗಿ ಕೈಗೊಳ್ಳಲಾಗಿದ್ದ ಮೂರು ದಿನಗಳ ಬೃಹತ್ ಶೋಧ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ನಿಲ್ಲಿಸಿವೆ. ಸ್ಥಳೀಯರು ವರದಿ ಮಾಡಿರುವಂತೆ ಯಾವುದೇ ಶಂಕಿತ ಭಯೋತ್ಪಾದಕರು ಈ ಅವಧಿಯಲ್ಲಿ ಪತ್ತೆಯಾಗಿಲ್ಲ. ಸೇನಾ ಸಮವಸ್ತ್ರ ಧರಿಸಿರುವ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ತಾವು ನೋಡಿದ್ದೇವೆ ಎಂಬುದಾಗಿ ಗ್ರಾಮಸ್ಥರು ವರದಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಯಾವುದೇ ಭಯೋತ್ಪಾದಕರು ಅಡಗಿಕೊಂಡಿಲ್ಲ ಎನ್ನುವುದನ್ನು ಖಾತರಿಪಡಿಸುವುದಕ್ಕಾಗಿ ಸೇನೆ, ಎನ್‌ಎಸ್‌ಜಿ ಮತ್ತು ಭಾರತೀಯ ವಾಯು ಪಡೆಯ ಗರುಡ್ ಕಮಾಂಡೋಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ವಾಯುನೆಲೆಯ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಿದ ಏಳು ದಿನಗಳ ಬಳಿಕ ನೆಲೆಯನ್ನು ಸುರಕ್ಷಿತ ಎಂಬುದಾಗಿ ಭದ್ರತಾ ಪಡೆಗಳು ಘೋಷಿಸಿವೆ.