ಕಾಂಗ್ರೆಸ್‌ನಿಂದ ಪಿಡಿಪಿಗೆ ಸ್ನೇಹಹಸ್ತ? ಇಂದು ಸೋನಿಯಾ-ಮೆಹಬೂಬ ಭೇಟಿ

ಶ್ರೀನಗರ,ಜ.9: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ರವಿವಾರ ಶ್ರೀನಗರಕ್ಕೆ ಆಗಮಿಸಿ, ಮೆಹಬೂಬ ಮುಫ್ತಿಯವರನ್ನು ಭೇಟಿಯಾಗಲಿರುವುದು, ಕಾಶ್ಮೀರದಲ್ಲಿ ರಾಜಕೀಯ ಶಕ್ತಿಗಳ ಮರುಧ್ರುವೀಕರಣದ ಸಾಧ್ಯತೆಯನ್ನು ಹೆಚ್ಚಿಸಿದೆ. ಸೋನಿಯಾ ಅವರ ಶ್ರೀನಗರ ಭೇಟಿಯು, ಸಂಪೂರ್ಣ ಖಾಸಗಿಯೆಂದು ಕಾಂಗ್ರೆಸ್ ಹಾಗೂ ಪಿಡಿಪಿ ಪಕ್ಷಗಳೆರಡೂ ಬಣ್ಣಿಸಿವೆ. ಮುಫ್ತಿಯವರ ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಸೋನಿಯಾ ಆಗಮಿಸುತ್ತಿದ್ದಾರೆಂದು ಅವು ತಿಳಿಸಿವೆ. ಈ ಮಧ್ಯೆ ಬಿಜೆಪಿ ಕೂಡಾ ಮೆಹಬೂಬ ಅವರಿಗೆ ಬೆಂಬಲ ನೀಡಲು ಸಿದ್ಧವೆಂದು ಹೇಳಿಕೊಂಡಿದೆಯಾದರೂ ಆ ಬಗ್ಗೆ ಅದನ್ನು ಅಧಿಕೃತಾಗಿ ಘೋಷಿಸಿಲ್ಲ.
ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಶುಕ್ರವಾರ ಬಿಜ್‌ಬೆಹ್ರಾದಲ್ಲಿ ಮುಫ್ತಿಯವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿರುವುದು ಕೂಡಾ ಕಾಂಗ್ರೆಸ್ ಹಾಗೂ ಪಿಡಿಪಿ ಪರಸ್ಪರ ಹತ್ತಿರುವಾಗುತ್ತಿರುವ ಸೂಚನೆಗಳನ್ನು ನೀಡಿದೆ. ಮೆಹಬೂಬಾ ಅವರಿಗೆ ಸಾಂಪ್ರದಾಯಿಕ ನಾಲ್ಕು ದಿನಗಳ ಶೋಕಾಚರಣೆಯ ಬಳಿಕವೂ, ಮುಖ್ಯಮಂತ್ರಿ ಹುದ್ದೆಯನ್ನು ಏರುವ ಬಗ್ಗೆ ಯೋಚಿಸಲು ಇನ್ನೂ ಕಾಲಾವಕಾಶ ಬೇಕಿದೆಯೆಂದು ಪಿಡಿಪಿಯ ಹಿರಿಯ ವಕ್ತಾರ ನಯೀಮ್ ಆಖ್ತರ್ ಹೇಳಿದ್ದಾರೆ. ‘‘ಪಕ್ಷದ ಸಹ ಸಂಸ್ಥಾಪಕಿಯಾದ ಮೆಹಬೂಬ ತನ್ನ ಕರ್ತವ್ಯದಿಂದ ಪಲಾಯನಗೈಯುತ್ತಿಲ್ಲ. ಮುಫ್ತಿ ಅವರ ನಿಧನವು ಆಕೆಗೊಂದು ದೊಡ್ಡ ನಷ್ಟವಾಗಿದೆ. ಇದರಿಂದ ಚೇತರಿಸಲುಆಕೆಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎಂದವರು ಹೇಳಿದ್ದಾರೆ.
ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ನಿರ್ಮಲ್‌ಸಿಂಗ್, ಶನಿವಾರ ಸಂಜೆ ಪಕ್ಷದ ನಾಯಕತ್ವದ ಜೊತೆ ರಹಸ್ಯಸಭೆ ನಡೆಸಿ, ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಮುಫ್ತಿ ಅವರ ನಿಧನದ ಶೋಕಾಚರಣೆಯ ಮುಗಿಯುವವರೆಗೂ, ಕಾದು ನೋಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ರವಿವಾರ ಬಿಜೆಪಿ ಶಾಸಕರು ಸಭೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಆದಾಗ್ಯೂ ಪಿಡಿಪಿಯ ನಾಯಕರು ಬಿಜೆಪಿ ಜೊತೆಗಿನ ಮೈತ್ರಿಯು ಮುಂದುವರಿಯಲಿದ್ದು, ಶೀಘ್ರದಲ್ಲೇ ಸರಕಾರವು ಪುನಾರಚನೆಯಾಗಲಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಪಿಡಿಪಿಯ ಹಿರಿಯ ನಾಯಕ ಅಲ್ತಾಫ್ ಬುಖಾರಿ, ಬಿಜೆಪಿ ಜೊತೆಗೆ ತಮ್ಮ ಪಕ್ಷದ ಮೈತ್ರಿ ಅಚಲವಾಗಿದ್ದು, ಇತರ ಪಕ್ಷದ ಬೆಂಬಲನನ್ನು ಕೋರುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದ್ದಾರೆ.





