ಭಿನ್ನಾಭಿಪ್ರಾಯವಿಲ್ಲ್ಲ: ಪಿಡಿಪಿ, ಬಿಜೆಪಿ
ಶ್ರೀನಗರ, ಜ. 9: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್‌ರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂತನ ಸರಕಾರದ ರಚನೆಯ ವಿಷಯದಲ್ಲಿ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಹಾಗೂ ಹೊಸ ಶರತ್ತುಗಳ ಸೇರ್ಪಡೆಯೂ ಇಲ್ಲ ಎಂಬುದಾಗಿ ಪಿಡಿಪಿ ಮತ್ತು ಬಿಜೆಪಿ ಶನಿವಾರ ಹೇಳಿವೆ.
‘ನಮ್ಮ ಕಡೆಯಿಂದ ಖಂಡಿತವಾಗಿಯೂ ಯಾವುದೇ ಶರತ್ತುಗಳಿಲ್ಲ ಹಾಗೂ ಸರಕಾರ ರಚನೆಯ ವಿಷಯದಲ್ಲಿ ನಮ್ಮ ನಾಯಕರ ಸಭೆಯೂ ನಡೆದಿಲ್ಲ. ಮುಫ್ತಿ ಸಾಹಿಬ್ ಅವರ ಸಾವಿಗಾಗಿ ಶೋಕಾಚರಣೆ ನಡೆಸುವ ಅವರ ಕುಟುಂಬದ ಹಕ್ಕನ್ನು ನಾವು ಗೌರವಿಸುತ್ತೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಾತ್ ಪೌಲ್ ಶರ್ಮಾ ಪಿಟಿಐಗೆ ತಿಳಿಸಿದರು.
ಸರಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬರೆದಿರುವ ಪತ್ರ ನನಗೆ ಸಿಕ್ಕಿದೆ ಎಂದು ಶರ್ಮ ಹೇಳಿದರು. ಆದರೆ, ರವಿವಾರ ನಡೆಯಲಿರುವ ಸಯೀದ್‌ರ ಸಾವಿನ ನಾಲ್ಕನೆ ದಿನದ ಆಚರಣೆ ಮುಗಿದ ಬಳಿಕವಷ್ಟೇ ಈ ವಿಷಯದಲ್ಲಿ ತನ್ನ ಪಕ್ಷ ನಿರ್ಧಾರ ತೆಗೆದುಕೊಳ್ಳುವುದು ಎಂದರು.
‘ಈ ವಿಷಯದಲ್ಲಿ ಯಾವುದೇ ಅವಸರವಿಲ್ಲ. ಮುಫ್ತಿ ಸಾಹಿಬ್‌ರ ನಾಲ್ಕನೆ ದಿನದ ಶೋಕಾಚರಣೆ ಕಾರ್ಯಕ್ರಮ ನಾಳೆ ಮುಗಿದ ಬಳಿಕ ನಾವು ಖಂಡಿತವಾಗಿಯೂ ಸಭೆ ಸೇರಲಿದ್ದೇವೆ ಹಾಗೂ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೇವೆ’ ಎಂದು ಶರ್ಮ ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ನಡುವೆ ನಡೆದದ್ದು ಐತಿಹಾಸಿಕ ಮೈತ್ರಿ ಹಾಗೂ ಅದು ಮುಂದುವರಿಯಬೇಕೆಂದು ತಾವು ಬಯಸುತ್ತೇವೆ ಎಂದರು.
ಹಿರಿಯ ಪಿಡಿಪಿ ನಾಯಕ ಹಾಗೂ ಮಾಜಿ ಶಿಕ್ಷಣ ಸಚಿವ ನಯೀಮ್ ಅಖ್ತರ್ ಕೂಡ, ನೂತನ ಸರಕಾರ ರಚನೆಗೆ ಸಂಬಂಧಿಸಿದಂತೆ ತನ್ನ ಪಕ್ಷವಾಗಲಿ ಬಿಜೆಪಿಯಾಗಲಿ ಹೊಸ ಶರತ್ತುಗಳನ್ನು ವಿಧಿಸಿಲ್ಲ ಎಂದು ಹೇಳಿದರು.
‘ಮೆಹಬೂಬಾಜಿ ಮುಫ್ತಿ ಸಾಹಿಬ್ ಅವರ ನಿಧನಕ್ಕೆ ಇನ್ನೂ ಶೋಕಿಸುತ್ತಿದ್ದಾರೆ. ಮುಫ್ತಿ ಸಾಹಿಬ್ ಅವರ ತಂದೆ ಮಾತ್ರ ಆಗಿರಲಿಲ್ಲ, ಮಾರ್ಗದರ್ಶಕ, ಪೋಷಕ ಹಾಗೂ ಪ್ರೇರಣೆಯಾಗಿದ್ದರು’ ಎಂದು ಅಖ್ತರ್ ನುಡಿದರು. ‘ಈ ಕ್ಷಣದಲ್ಲಿ ಸರಕಾರ ರಚನೆಯ ಕುರಿತಂತೆ ಚರ್ಚೆ ನಡೆಸುವ ಸ್ಥಿತಿಯಲ್ಲಿ ನಾವಿಲ್ಲ. ಹಾಗಿರುವಾಗ, ಶರತ್ತುಗಳ ಪ್ರಶ್ನೆ ಎಲ್ಲಿಂದ ಬಂತು?’ ಎಂದು ಪ್ರಶ್ನಿಸಿದರು.