ಭಯೋತ್ಪಾದಕ ದಾಳಿ ವಿರುದ್ಧ ಕಾರ್ಯಾಚರಣೆ ತೃಪ್ತಿದಾಯಕ ಮೋದಿ ಮೆಚ್ಚುಗೆ

ಪಠಾಣ್‌ಕೋಟ್ ವಾಯುನೆಲೆಗೆ ಪ್ರಧಾನಿ ಭೇಟಿ
ಪಠಾಣ್‌ಕೋಟ್, ಜ.9: ಕಳೆದ ಶನಿವಾರ ಶಂಕಿತ ಪಾಕಿಸ್ತಾನಿ ಭಯೋತ್ಪಾದಕರಿಂದ ನಡೆದ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವ್ಯೆಹಾತ್ಮಕವಾಗಿ ಮಹತ್ವದ್ದಾಗಿರುವ ಇಲ್ಲಿನ ವಾಯುಪಡೆಯ ವಾಯುನೆಲೆಗೆ ಭೇಟಿ ನೀಡಿದರು. ಈ ಸಂದರ್ಭ ಅವರು ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಅರೂಪ್ ರಹಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಅವಲೋಕನ ನಡೆಸಿದರು.
ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಪಠಾಣ್‌ಕೋಟ್‌ನಲ್ಲಿ, ವಿಶೇಷವಾಗಿ ಢಾಕಿ ಚೌಕ್ ಸೇರಿದಂತೆ ವಾಯುನೆಲೆಯ ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳಿಗೆ ವಾಯುನೆಲೆಯ ಸಮೀಪದಲ್ಲಿ ಸುಳಿಯಲೂ ಅವಕಾಶವನ್ನು ನಿರಾಕರಿಸಲಾಗಿತ್ತು.
ವಾಯುನೆಲೆಯಲ್ಲಿ ಸುಮಾರು 90 ನಿಮಿಷಗಳನ್ನು ಕಳೆದ ಮೋದಿಯವರಿಗೆ ರಹಾ ಮತ್ತು ಎನ್‌ಎಸ್‌ಜಿ ಅಧಿಕಾರಿಗಳು ನಕಾಶೆಗಳು, ವೈಮಾನಿಕ ಚಿತ್ರಗಳು ಮತ್ತು ಕಾರ್ಯಾಚರಣೆಯ ಚಿತ್ರಗಳ ನೆರವಿನೊಂದಿಗೆ ಭಯೋತ್ಪಾದಕ ದಾಳಿ ಮತ್ತು ಪ್ರತಿ ಕಾರ್ಯಾಚರಣೆಯ ಕುರಿತು ವಿಸ್ತ್ರತ ಮಾಹಿತಿಗಳನ್ನು ನೀಡಿದರು. ವಾಯುನೆಲೆಯಲ್ಲಿ ಕೈಗೊಳ್ಳಲಾಗಿರುವ ಭದ್ರತಾಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.
ದಾಳಿಕೋರರ ವಿರುದ್ಧದ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೋದಿಯವರ ಭೇಟಿಯ ಬಳಿಕ ಪ್ರಧಾನಿ ಕಚೇರಿಯು ಟ್ವೀಟಿಸಿದೆ.
ದಾಳಿ ಸ್ಥಳದಲ್ಲಿ ವಿವಿಧ ಘಟಕಗಳ ನಡುವಿನ ಸಮನ್ವಯದ ಬಗ್ಗೆಯೂ ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯ ಸ್ಥಳದಲ್ಲಿದ್ದ ಭದ್ರತಾ ಪಡೆಗಳ ಪುರುಷ ಮತ್ತು ಮಹಿಳಾ ಸಿಬ್ಬಂದಿಯ ಶೌರ್ಯ ಮತ್ತು ದೃಢ ನಿರ್ಧಾರವನ್ನು ಅವರು ಪ್ರಶಂಸಿಸಿದ್ದಾರೆ ಎಂದು ಇನ್ನೊಂದು ಟ್ವೀಟ್ ತಿಳಿಸಿದೆ.
ಭಯೋತ್ಪಾದಕರು ದಾಳಿ ನಡೆಸಿದ ಸ್ಥಳಕ್ಕೂ ಮೋದಿ ಭೇಟಿ ನೀಡಿದರು. ಹತ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅವರು ವೀಕ್ಷಿಸಿದರು. ದಾಳಿಯ ವಿರುದ್ಧದ ಕಾರ್ಯಾಚರಣೆಯಲ್ಲಿ ಏಳು ಭಾರತೀಯ ಯೋಧರೂ ಹುತಾತ್ಮರಾಗಿದ್ದರು.
ಭಯೋತ್ಪಾದಕರೊಂದಿಗೆ ಭದ್ರತಾ ಪಡೆಗಳ ಮೊದಲ ಮುಖಾಮುಖಿ ನಡೆದಿದ್ದ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್ ಯಾರ್ಡ್‌ಗೆ ತೆರಳಿ ಪರಿಶೀಲಿಸಿದ ಮೋದಿ, ಏರ್‌ಮನ್‌ಗಳ ಎರಡು ಅಂತಸ್ತುಗಳ ವಸತಿ ಕಟ್ಟಡದ ಬಳಿಗೂ ಭೇಟಿ ನೀಡಿದರು. ಭದ್ರತಾ ಪಡೆಗಳು ಈ ಕಟ್ಟಡವನ್ನು ಸ್ಫೋಟಿಸಿ ಕೊನೆಯ ಇಬ್ಬರು ಭಯೋತ್ಪಾದಕರನ್ನು ಬಲಿ ಪಡೆದಿದ್ದವು.
ಪ್ರಧಾನಿಯವರು ಬಳಿಕ ಭಾರತ-ಪಾಕ್ ಗಡಿಯಲ್ಲಿನ ಮುಂಚೂಣಿ ನೆಲೆಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.
ತನ್ಮಧ್ಯೆ ಸ್ಥಳೀಯರು ಇಬ್ಬರು ಶಂಕಿತ ಉಗ್ರರನ್ನು ಕಂಡಿದ್ದ ಗುರುದಾಸ್‌ಪುರ ಜಿಲ್ಲೆಯ ತಿಬ್ರಿ ಗ್ರಾಮದಲ್ಲಿ ಪೊಲೀಸರ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ತಾವು ಶೋಧ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿಲ್ಲ, ಆದರೆ ಯಾವನೇ ಉಗ್ರರು ಈವರೆಗೆ ತಮ್ಮ ಕಣ್ಣಿಗೆ ಬಿದ್ದಿಲ್ಲ ಎಂದು ಡಿಐಜಿ ಕೆವಿಪಿ ಸಿಂಗ್ ತಿಳಿಸಿದರು.







