ಜಮ್ಮುಕಾಶ್ಮೀರದಲ್ಲಿ ರಾಜ್ಯಪಾಲ ಆಡಳಿತ

ಶ್ರೀನಗರ, ಜ.9: ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ನಿಧನದ ಬಳಿಕ ಕಣಿವೆ ರಾಜ್ಯದಲ್ಲಿ ನೆಲೆಸಿದ್ದ ರಾಜಕೀಯ ಅನಿಶ್ಚಿತತೆಗೆ ಶನಿವಾರ ತೆರೆ ಬಿದ್ದಿದ್ದು, ಅಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ.
ಜಮ್ಮುಕಾಶ್ಮೀರದಲ್ಲಿ ರಾಜ್ಯಪಾಲ ಆಡಳಿತ ಹೇರ ಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಶನಿವಾರ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ರಾಜ್ಯಪಾಲರ ಆಡಳಿತ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಮುಫ್ತಿ ಮುಹಮ್ಮದ್ ಸಯೀದ್ ನಿಧನದ ಬಳಿಕ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಲು ಮೆಹಬೂಬ ಮುಫ್ತಿ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆಡಳಿತ ಹೇರಿಕೆ ಅನಿವಾರ್ಯವಾಯಿತು. ಪಿಡಿಪಿಯ 28 ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಹುದ್ದೆಗೆ ಮೆಹಬೂಬ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅದಾಗ್ಯೂ, ಅವರು ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಈ ಮಧ್ಯೆ ಪಿಡಿಪಿಯ ಜೊತೆಗಾರ ಪಕ್ಷವಾದ ಬಿಜೆಪಿ ಹೇಳಿಕೆಯೊಂದನ್ನು ನೀಡಿ ನೂತನ ಸರಕಾರ ರಚನೆ ಬಗ್ಗೆ ರವಿವಾರ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದೆ.





