ಏರ್‌ಸೆಲ್-ಮ್ಯಾಕ್ಸಿಸ್ ಹಗರಣ: ಆರೋಪ ಪಟ್ಟಿಯಲ್ಲಿ ಮಾರನ್ ಸೋದರರು

ಹೊಸದಿಲ್ಲಿ, ಜ.9: ಏರ್‌ಸೆಲ್-ಮ್ಯಾಕ್ಸಿಸ್ ವ್ಯವಹಾರ ಸಂಬಂಧಿ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್, ಅವರ ಸೋದರ ಕಲಾನಿಧಿ ಮಾರನ್ ಹಾಗೂ ಇತರ ನಾಲ್ವರನ್ನು ಹೆಸರಿಸಲಾಗಿದೆ.
ದಯಾನಿಧಿ, ಕಲಾನಿಧಿ, ಅವರ ಪತ್ನಿ ಕಾವೇರಿ ಕಲಾನಿಧಿ, ಮೆ ಸೌತ್ ಏಶ್ಯ ಎಫ್‌ಎಂ, (ಎಸ್‌ಎಎಫ್‌ಎಲ್) ಆಡಳಿತ ನಿರ್ದೇಶಕ ಕೆ.ಷಣ್ಮಗಂ ಹಾಗೂ ಮೆ ಸನ್ ಡೈರೆಕ್ಟ್ ಟಿವಿ ಪ್ರೈ.ಲಿ.(ಎಸ್‌ಡಿಟಿಪಿಎಲ್) ಹಾಗೂ ಎಸ್‌ಎಎಫ್‌ಎಲ್ ಕಂಪೆನಿಗಳನ್ನು ಹಣಚೆಲುವೆ ತಡೆ ಕಾಯ್ದೆಯನ್ವಯ ದಾಖಲಿಸಲಾಗಿರುವ ಮೊಕದ್ದಮೆಯಲ್ಲಿ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಮಾರಿಷಸ್ ಮೂಲದ ಕಂಪೆನಿಯೊಂದು ಎಸ್‌ಡಿಟಿಪಿಎಲ್ ಹಾಗೂ ಎಸ್‌ಎಎಫ್‌ಎಲ್ ಕಂಪೆನಿಗಳ ಮೂಲಕ ದಯಾನಿಧಿ ಮಾರನ್‌ರಿಗೆ ರೂ.742.58 ಕೋಟಿ ಅನ್ಯಾಯಾರ್ಜಿತ ಹಣವನ್ನು ನೀಡಿದೆಯೆಂದು ಆರೋಪಿಸಲಾಗಿದೆ.
ಈ ಎರಡು ಕಂಪೆನಿಗಳು ಕಲಾನಿಧಿಯವರ ಮಾಲಕತ್ವದ್ದಾಗಿದೆ. ಹಣವನ್ನು ಕಂಪೆನಿಗಳು ತಮ್ಮ ವ್ಯವಹಾರಕ್ಕಾಗಿ ಬಳಸಿಕೊಂಡಿವೆ. ಪಿಎಂಎಲ್‌ಎ ಕಾಯ್ದೆಯಂತೆ, ಅವ್ಯವಹಾರ ನಡೆದಿರುವ ರೂ.742.58 ಕೋಟಿಗೆ ಸಮನಾದ ವೌಲ್ಯದ ಆಸ್ತಿಯನ್ನು ದಯಾನಿಧಿ, ಕಲಾನಿಧಿ, ಕಾವೇರಿ ಮತ್ತಿತರರಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೆಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಅವ್ಯವಹಾರದ ಮೊತ್ತ ರೂ.742.58 ಕೋಟಿಯನ್ನು ಎಸ್‌ಡಿಟಿಪಿಎಲ್ ಹಾಗೂ ಎಸ್‌ಎಎಫ್‌ಎಲ್‌ಗಳಿಗೆ ಬಂಡವಾಳವೆಂದು ಮಾರನ್ ತನ್ನ ಬಂಧುಗಳ ಕಂಪೆನಿಗಳ ಮೂಲಕ ಪಡೆದಿದ್ದರು. ಕಲಾನಿಧಿ ಹಾಗೂ ಕಾವೇರಿಯವರ ಮಾಲಕತ್ವದ ಕಂಪೆನಿಗಳ ಮೂಲಕ ಹಣ ಪಡೆದು ಅವರು ಹಣ ಚೆಲುವೆಯ ಅಪರಾಧ ನಡೆಸಿದ್ದಾರೆಂದೂ ಅದು ಹೇಳಿದೆ.







