ಸುಪ್ರೀಂಕೋರ್ಟ್ ಆದೇಶದಂತೆ ಹೆಲ್ಮೆಟ್ ಕಡ್ಡಾಯ: ಪರಮೇಶ್ವರ್

ಬೆಂಗಳೂರು, ಜ.9: ಸುಪ್ರೀಂ ಕೋರ್ಟಿನ ರಸ್ತೆ ಸುರಕ್ಷತಾ ಸಮಿತಿ ಶಿಫಾರಸಿನನ್ವಯ ದ್ವಿಚಕ್ರ ವಾಹನ ಹಿಂಬದಿಯ ಸವಾರರಿಗೂ ಹೆಲ್ಮೆಟ್(ಶಿರಸ್ತ್ರಾಣ)ಕಡ್ಡಾಯಗೊಳಿಸಿದ್ದು, ರಾಜ್ಯ ಸರಕಾರ ಹೆಲ್ಮೆಟ್ ಕಡ್ಡಾಯಗೊಳಿಸಿದೆಯೆಂಬ ತಪ್ಪು ಕಲ್ಪನೆ ಸಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಸರಕಾರ ಜಾರಿಗೊಳಿಸಿದೆ. ಹೆಲ್ಮೆಟ್ ಕಡ್ಡಾಯ ಸಂಬಂಧ ಎಷ್ಟೇ ಟೀಕೆಗಳು ಬಂದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ಹಿಂಬದಿಯ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ಹಾಗೂ ಅವಧಿ ವಿಸ್ತರಣೆ ಸಂಬಂಧ ಸಾರ್ವಜನಿಕ ಚರ್ಚೆ ನಡೆದಿದೆ.
ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಬೈಕ್ ಸವಾರರೇ ಹೆಚ್ಚಿದ್ದು, ಆ ಹಿನ್ನೆಲೆಯಲ್ಲಿ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ನಗರದಲ್ಲಿ 58 ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ರಸ್ತೆಗಳ ದುರಸ್ತಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದು ಸುಲಭದ ಮಾತಲ್ಲ. ಆದರೂ, ಸುಗಮ ಸಂಚಾರಕ್ಕೆ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಕೋರಿದರು.
ನಗರದ ಪ್ರಮುಖ ವೃತ್ತಗಳಲ್ಲಿ 180 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ವೃತ್ತಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಮಾಹಿತಿ ಕಡ್ಡಾಯ: ಐಟಿ ಕಂಪೆನಿಗಳು ಹಾಗೂ ಖಾಸಗಿ ಉದ್ಯಮಗಳಲ್ಲಿನ ವಾಹನಗಳ ಚಾಲಕ ಮತ್ತು ಕ್ಲೀನರ್‌ಗಳ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿ ಸಮೀಪದ ಪೊಲೀಸ್ ಠಾಣೆಗಳಿಗೆ ನೀಡಬೇಕೆಂದ ಅವರು, ತಮ್ಮ ಉದ್ಯೋಗಿಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಬೇಕೆಂದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ವಿಶ್ವದಲ್ಲಿ ಪ್ರತಿವರ್ಷ 1.24 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಭಾರತದಲ್ಲಿ 1.5 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿ-ಸಂಖ್ಯೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್‌ಬೇಗ್, ಮೇಯರ್ ಮಂಜುನಾಥ ರೆಡ್ಡಿ, ಮೇಲ್ಮನೆ ಸರಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಸಾರಿಗೆ ಆಯುಕ್ತ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ನಗರ ಪೊಲೀಸ್ ಆಯುಕ್ತ ಮೇಘರಿಕ್ ಹಾಜರಿದ್ದರು.







