ಪ್ರಶಸ್ತಿ ಸ್ವೀಕರಿಸುವವರನ್ನು ಶಂಕಿಸಬಾರದು: ಬರಗೂರು

ಬರಗೂರು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಜ.9: ಅಸಹಿಷ್ಣುತೆ ವಿರುದ್ಧ ಹೋರಾಟ ಮಾಡುತ್ತಿರುವವರು ಪ್ರಶಸ್ತಿ ಸ್ವೀಕರಿಸುವ ಸಾಹಿತಿಗಳನ್ನು ಅನುಮಾನದ ದೃಷ್ಟಿಯಿಂದ ನೋಡಬಾರ ದೆಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ಶನಿವಾರ ಕರ್ನಾಟಕ ಸಾಹಿತ್ಯ ಅಕಾಡಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 2013ರ ಗೌರವ ಪ್ರಶಸ್ತಿ ಹಾಗೂ 2012ರ ಪುಸ್ತಕ ಬಹುಮಾನ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸುತ್ತಿರುವ ಬಹುಪಾಲು ಸಾಹಿತಿಗಳು ತಮ್ಮ ಜೀವನವಿಡೀ ಹೋರಾಟ ಮಾಡಿದವರು. ಕೇವಲ ಪ್ರಶಸ್ತಿ ಸ್ವೀಕರಿಸಿದ ಮಾತ್ರಕ್ಕೆ ಅನುಮಾನದಿಂದ ನೋಡುವ ಅಗತ್ಯವಿಲ್ಲ. ಹಾಗೆಯೇ ಪ್ರಶಸ್ತಿಯನ್ನು ತಿರಸ್ಕರಿಸಿದವರನ್ನು ತಿರಸ್ಕಾರದಿಂದ ನೋಡುವ ಅಗತ್ಯವೂ ಇಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಹಲವು ಮಾರ್ಗಗಳಿವೆ. ಹೋರಾಟದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಎಲ್ಲರಿಗೂ ಇದೆ ಎಂದು ಅವರು ತಿಳಿಸಿದರು.
ಬಾಯಿ ಬಾಕರಿಂದ ವಿಮರ್ಶೆಗೆ ಅಪಾಯ: ಅಕಾಡಮಿ ವಲಯದಲ್ಲಿ ಚಿಂತಿಸಬೇಕಾದ ವಿಷಯಗಳನ್ನು ಅಕಾಡಮಿಯ ಕೆಲವು ಬಾಯಿ ಬಾಕರು ಹಾದಿ ಬೀದಿಯಲ್ಲಿ ಚರ್ಚಿಸುತ್ತಿದ್ದಾರೆ. ಆ ಮೂಲಕ ವಿಮರ್ಶೆಯ ವಿವೇಕಕ್ಕೆ ವಿಷ ಪ್ರಾಷಾಣ ಹಾಕುತ್ತಿದ್ದಾರೆ. ಇದರಿಂದ ಪ್ರಗತಿಪರ ಚಿಂತನೆಗಳು ಪರಿಣಾಮಕಾರಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಬರಗೂರು ಆತಂಕ ವ್ಯಕ್ತಪಡಿಸಿದರು.
ಗರ್ಭಗುಡಿ ವಿಮರ್ಶಕರು ದೇಶದ ಇತಿಹಾಸವನ್ನು ತಿರುಚುತ್ತಿದ್ದಾರೆ. ಚರಿತ್ರೆಯಲ್ಲಿ ಬರುವ ವ್ಯಕ್ತಿಗಳನ್ನು ದೈವೀಕರಿಸುವ ಕಾರ್ಯ ನಡೆಯುತ್ತಿದೆ.
ಈ ಬಗ್ಗೆ ವಸ್ತುನಿಷ್ಠವಾಗಿ ವಿಮರ್ಶಿಸಿ ತಿಳಿವಳಿಕೆ ನೀಡಬೇಕಾದ ಬುದ್ಧಿಜೀವಿಗಳು ಅನಗತ್ಯ ವಿಷಯಗಳ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಬಂಗಾಳದ ಕವಿ ಡಾ.ಸುಬೋಧ್ ಸರ್ಕಾರ್ ಮಾತನಾಡಿ, ದೇಶದ ಪ್ರತಿರಾಜ್ಯದ ಜನತೆ ಹೇಗೆ ಚಿಂತಿಸುತ್ತಿದ್ದಾರೆ. ಅಲ್ಲಿನ ಸಂಸ್ಕೃತಿ ಪರಂಪರೆಗಳು ಕಾಲಕಾಲಕ್ಕೆ ಹೇಗೆ ಬದಲಾಗುತ್ತಿವೆ ಎಂಬುದನ್ನು ಅರಿಯಬೇಕಾದರೆ ಪ್ರತಿ ರಾಜ್ಯದ ಸಾಹಿತ್ಯ ದೇಶದ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ರಾಜೇಂದ್ರ ಜೆನ್ನಿ ಮಾತನಾಡಿ, ಕನ್ನಡ ಚರಿತ್ರೆ ಬಹುತ್ವದ, ಜಾತ್ಯತೀತ ಮನೋಭಾವದ, ಮಾನವೀಯತೆಯಿಂದ ಕೂಡಿದೆ. ಈ ಬಹುತ್ವವನ್ನು ಹಾಳುಮಾಡಿ ಏಕಮುಖ ಸಂಸ್ಕೃತಿಯನ್ನು ಸ್ಥಾಪಿಸಲು ಮೂಲಭೂತವಾದಿಗಳು ಕನ್ನಡದ ಸಂಸ್ಕೃತಿಯ ಮೇಲೆ ಯುದ್ಧದ ರೀತಿಯಲ್ಲಿ ದಾಳಿಗಳನ್ನು ನಡೆಸುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಲ್ಲೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಸಂಶೋಧಕ ಎಂ.ಎಂ.ಕಲಬುರ್ಗಿಯವರ ಹತ್ಯೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಆಘಾತವನ್ನು ಉಂಟುಮಾಡಿತ್ತು. ಹೀಗಾಗಿ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಬೇಕಾಯಿತೆಂದು ತಿಳಿಸಿದರು.
ಸಂಶೋಧಕ ಪ್ರೊ.ಕೆ.ಎಸ್.ಭಗವಾನ್, ಸಾಹಿತಿ ಡಾ.ಬಿ.ಎನ್.ಸುಮಿತ್ರಾಭಾಯಿ, ಡಾ.ರಾಜೇಂದ್ರ ಚೆನ್ನಿ ಹಾಗೂ ಕತೆಗಾರ ಡಾ.ಮೊಗಳ್ಳಿ ಗಣೇಶ್ ಅವರಿಗೆ 2013ರ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಎಸ್.ಚನ್ನಪ್ಪಗೌಡ ಮತ್ತಿತರರಿದ್ದರು.
ಬಿಗಿ ಭದ್ರತೆಯಲ್ಲಿ ಪ್ರಶಸ್ತಿ ಪ್ರದಾನ!
ಇದೇ ಮೊದಲ ಬಾರಿಗೆ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೆ.ಎಸ್.ಭಗವಾನ್ ಹೆಸರು ಇದ್ದುದು, ಪ್ರಶಸ್ತಿ ಪ್ರಕಟವಾದಾಗ ಕೆಲವರಿಂದ ವಿರೋಧ ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ, ಅಕಾಡಮಿ ಪೊಲೀಸರ ನೆರವು ಕೇಳಿತ್ತು. ಪೊಲೀಸರು ಒಂದು ವ್ಯಾನ್‌ನಲ್ಲಿ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ಆಗಮಿಸಿ, ಭದ್ರತೆ ಒದಗಿಸಿದ್ದು ವಿಶೇಷವಾಗಿತ್ತು.







