ಎತ್ತಿನಹೊಳೆ ಯೋಜನೆ: ಪ್ರತ್ಯೇಕ ತನಿಖಾ ಆಯೋಗ ರಚನೆಗೆ ಜನಾರ್ದನ ಪೂಜಾರಿ ಆಗ್ರಹ
ಮಂಗಳೂರು, ಜ.9: ಎತ್ತಿನಹೊಳೆ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನರಿಗೆ ಮೋಸವಾಗಿದೆ ಎಂಬ ಅಭಿಪ್ರಾಯವಿದ್ದು, ಇದರ ಹಿಂದಿರುವ ಸತ್ಯ ತಿಳಿಯಲು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ಆಯೋಗ ರಚಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ನಡೆದಿದೆ ಎಂಬ ಸಂಶಯ ಇರುವ ಸಂದರ್ಭ ಉನ್ನತ ಮಟ್ಟದ ತನಿಖೆ ನಡೆಸುವುದು ರಾಜಧರ್ಮ ಎಂದು ಹೇಳಿದರು.
ಯೋಜನೆಯಲ್ಲಿ ಐಪಿಸಿ 463, 464, 468 (ಪೋರ್ಜರಿ, ತಪ್ಪು ಹೇಳಿಕೆ, ಪೋರ್ಜರಿ ಮತ್ತು ವಂಚನೆ) ಕಾಯ್ದೆಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಕಾಮಗಾರಿ ಮುಂದುವರಿಸಲು ಆಕ್ಷೇಪವಿಲ್ಲ ಎಂದು ಹಸಿರು ಪೀಠ ಹೇಳಿದೆ. ವಿಚಾರಣೆಯನ್ನು ಜ.27ರ ತನಕ ಮುಂದೂಡಲಾಗಿದೆ ಎಂದು ಇನ್ನೊಂದು ಹೇಳಿಕೆ ಬಂದಿದೆ. ತಜ್ಞ ಅಧಿಕಾರಿಗಳು ಹೊಸ ಗೊಂದಲಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಮುಖ್ಯಮಂತ್ರಿ ಜನರ ನಂಬಿಕೆಗೆ ದ್ರೋಹ ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಸಿ. ಭಂಡಾರಿ, ಎ.ಸಿ.ವಿನಯರಾಜ್, ಟಿ.ಕೆ.ಸುಧೀರ್, ಎಸ್.ಅಪ್ಪಿ, ಡಿ.ಡಿ.ಕಟ್ಟೆಮಾರ್, ನಾಗವೇಣಿ, ಸರಳಾ ಕರ್ಕೇರ, ಕರುಣಾಕರ ಶೆಟ್ಟಿ, ಚೇತನ್ ಬೆಂಗ್ರೆ, ನಝೀರ್ ಬಜಾಲ್ ಉಪಸ್ಥಿತರಿದ್ದರು.







