‘ಪ್ಲಾಸ್ಟಿಕ್ ಪಾರ್ಕ್’ಗೆ ಮುಡಿಪು ಅಥವಾ ಶಿಬರೂರು ಆಯ್ಕೆ
ಮಂಗಳೂರು, ಜ.9: ಸುಮಾರು 300 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಪ್ಲಾಸ್ಟಿಕ್ ಪಾರ್ಕ್’ ಸ್ಥಾಪನೆಗೆ ಮುಡಿಪು ಕೆನರಾ ಕೈಗಾರಿಕಾ ವಲಯ ಅಥವಾ ಶಿಬರೂರು ಪ್ರದೇಶದಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಮುಂದಿನ ಹಂತದಲ್ಲಿ ಪಾಲಿ ಎಥಿಲಿನ್ ಘಟಕಗಳನ್ನು ಸ್ಥಾಪಿಸಲಿದೆ. ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಗೆ ಉತ್ತಮ ಅವಕಾಶ ಇರುವುದರಿಂದ ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘ ಕೇಂದ್ರ ಸರಕಾರದ ಕೆಮಿಕಲ್ಸ್ ಹಾಗೂ ಪೆಟ್ರೋ ಕೆಮಿಕಲ್ಸ್ ಇಲಾಖೆಗೆ ಮಂಗಳೂರಿನಲ್ಲಿ ‘ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸುವಂತೆ ಮನವಿಯನ್ನು ಮಾಡಿತ್ತು. ಈ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ಅನಂತ್‌ಕುಮಾರ್ ಮಂಗಳೂರಿನಲ್ಲಿ ‘ಪ್ಲಾಸ್ಟಿಕ್ ಪಾರ್ಕ್’ ಸ್ಥಾಪನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸೂಚನೆಯಂತೆ ಸೂಕ್ತ ಜಾಗವನ್ನು ಗುರುತಿಸಿ ರಾಜ್ಯ ಸರಕಾರವು ಪ್ರಸ್ತಾಪವನ್ನು ಸಲ್ಲಿಸಿದೆ.
ಈ ಸೂಚನೆಯಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮುಡಿಪು ಕೆನರಾ ಕೈಗಾರಿಕಾ ವಲಯ ಅಥವಾ ಶಿಬರೂರುಪ್ರದೇಶದಲ್ಲಿ ‘ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲು ಪ್ರಸ್ತಾಪವನ್ನು ಕಳುಹಿಸಲಾಗಿದೆ.
ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಫೆ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯುವ ‘ಇನ್‌ವೆಸ್ಟ್ ಕರ್ನಾಟಕ-2016 ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್’ನಲ್ಲಿ ಚಾಲನೆ ನೀಡಲಾಗುವುದು.
ಕೇಂದ್ರ ಸರಕಾರದ ಪ್ಲಾಸ್ಟಿಕ್ ಪಾರ್ಕ್ ಯೋಜನೆಯನ್ವಯ 40 ಕೋಟಿ ರೂ. ಮೀರದಂತೆ ಯೋಜನೆಯ 50 ಶೇ. ಹಣವನ್ನು ಅನುದಾನವಾಗಿ ನೀಡಲಾಗುತ್ತದೆ. ಈ ಅನುದಾನವನ್ನು ಪ್ಲಾಸ್ಟಿಕ್ ಪಾರ್ಕ್‌ನಲ್ಲಿ ಉತ್ಪಾದನೆ ಚಟುವಟಿಕೆಗಳಿಗೆ ಪೂರಕ ಮೂಲಭೂತ ಸೌಕರ್ಯಗಳು, ನೌಕರರಿಗೆ ವಾಸ್ತವ್ಯ ಸೌಲಭ್ಯಗಳು, ತ್ಯಾಜ್ಯ ಸಂಸ್ಕರಣ ಘಟಕಗಳು, ತಂತ್ರಜ್ಞಾನ ತರಬೇತಿ ಕಾರ್ಯಗಳನ್ನು ಕಲ್ಪಿಸುವ ಅವಕಾಶವಿರುತ್ತದೆ. ಈ ಯೋಜನೆಯು ಅನುಷ್ಠಾನಗೊಂಡರೆ ಸುಮಾರು 10,000 ಮಂದಿಗೆ ಉದ್ಯೋಗ ದೊರಕಲಿದೆ ಎಂದು ಗೋಕುಲ್ ದಾಸ್ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







