ಬಿಸಿಯೂಟ ಯೋಜನೆ;ಸಿಎಜಿ ವರದಿಯ ಪರಾಮರ್ಶೆಯಾಗಲಿ
ಶಾಲೆಗಳಿಗೆ ಮಕ್ಕಳು ದಾಖಲಾಗುವ ಪ್ರಮಾಣವನ್ನು ಹೆಚ್ಚಿಸುವುದು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಒಂದು ಉದ್ದೇಶ ಮಾತ್ರ. ಮಕ್ಕಳ ಆಹಾರ ಹಕ್ಕನ್ನು ರಕ್ಷಿಸುವುದು, ತರಗತಿಯಲ್ಲಿ ಹಸಿವನ್ನು ನೀಗಿಸಿ ಶೈಕ್ಷಣಿಕ ನಿರ್ವಹಣೆಯನ್ನು ಹೆಚ್ಚಿಸುವುದು, ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವುದು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ನೀಡುವುದು ಮುಂತಾದ ಉದ್ದೇಶಗಳನ್ನೂ ಯೋಜನೆ ಹೊಂದಿದೆ. ಈ ಗುರಿಗಳನ್ನು ಸಾಧಿಸುವಲ್ಲಿ ಯೋಜನೆ ನೀಡಿರುವ ಕೊಡುಗೆಯನ್ನೂ ನಾವು ಗುರುತಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಸಿಯೂಟದಲ್ಲಿ ಮೊಟ್ಟೆ, ಮೀನಿನಂತಹ ಪೌಷ್ಟಿಕ ಆಹಾರಗಳನ್ನು ನೀಡುವ ಬಗ್ಗೆ ನಾವು ಯೋಚಿಸಬೇಕು. ಆಹಾರವನ್ನು ಇನ್ನಷ್ಟು ಪೌಷ್ಟಿಕಗೊಳಿಸುವುದಕ್ಕಾಗಿ ಅಡುಗೆ ವೆಚ್ಚವನ್ನು ಪರಿಷ್ಕರಿಸಬೇಕು ಎಂದು ಸಿಎಜಿ ಪ್ರಸ್ತಾಪಿಸಿದೆ. ಇದನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು. ಬಿಸಿಯೂಟದ ಉದ್ದೇಶವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಸಿಎಜಿ ವರದಿಯನ್ನು ಸರಕಾರ ಬಳಸಿಕೊಳ್ಳಬೇಕಾಗಿದೆ.
ಇ ತ್ತೀಚೆಗೆ ಸಿಎಜಿ ವರದಿಯು ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಅವ್ಯವಸ್ಥೆಯ ಕುರಿತಂತೆ ತನ್ನ ವರದಿಯಲ್ಲಿ ವಿವರಗಳನ್ನು ನೀಡಿತ್ತು. ಈ ವರದಿ ಯೋಜನೆಯ ಕೆಲವು ಋಣಾತ್ಮಕ ಅಂಶಗಳನ್ನು ಹೇಳಿದ್ದೇ ತಡ, ಕೆಲವರು, ಈ ಬಿಸಿಯೂಟದ ತಟ್ಟೆಯ ವಿರುದ್ಧ ಮತ್ತೆ ಮುಗಿ ಬಿದ್ದಿದ್ದಾರೆ. ಬಿಸಿಯೂಟ ಯೋಜನೆಯನ್ನೇ ಸಿಎಜಿ ನಿಂದಿಸಿದೆ ಮತ್ತು ಅದರ ಅಪ್ರಸ್ತುತತೆಯನ್ನು ಎತ್ತಿ ಹಿಡಿದಿದೆ ಎಂಬಂತೆ ಕೆಲವು ಹಿತಾಸಕ್ತಿಗಳು ಬಿಸಿಯೂಟದ ತಟ್ಟೆಗೆ ಕೈ ಹಾಕಿದ್ದಾರೆ. ಈ ಹಿತಾಸಕ್ತಿಗಳು ಯಾರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ದೇಶದ ಮೇಲ್ವರ್ಗ ಮತ್ತು ಜಾತಿ ಪೀಡಿತ ಮನಸ್ಸುಗಳು ಬಿಸಿಯೂಟದ ವಿರುದ್ಧ ಸದಾ ಕೆಂಡ ಕಾರುತ್ತಲೇ ಇವೆ. ಎಲ್ಲ ಜಾತಿ, ವರ್ಗಗಳ ಮಕ್ಕಳ ಜೊತೆಗೆ ತಮ್ಮ ಮಕ್ಕಳು ಕೂತು ಉಣ್ಣುವುದು, ಮುಖ್ಯವಾಗಿ ಕೆಳಜಾತಿಯವರು ಮಾಡಿದ ಅಡುಗೆಯನ್ನು ತಮ್ಮ ಹುಡುಗರು ಉಣ್ಣುವುದರ ಬಗ್ಗೆ ವ್ಯಾಪಕ ಅಸಮಾಧಾನವಿದೆ. ಇದನ್ನು ನೇರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದ ಕಾರಣ, ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಬಿಸಿಯೂಟವನ್ನು ಇವರು ವಿರೋಧಿಸುತ್ತಾ ಬಂದಿದ್ದಾರೆ. ಭಾರತದ ಮಧ್ಯಾಹ್ನದ ಬಿಸಿಯೂಟ ಯೋಜನೆ (ಎಂಡಿಎಂಎಸ್) ದೇಶಾದ್ಯಂತವಿರುವ 12 ಲಕ್ಷ ಸರಕಾರಿ ಶಾಲೆಗಳ 11 ಕೋಟಿ ಮಕ್ಕಳಿಗೆ ತಲುಪುತ್ತಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಬಿಸಿಯೂಟವನ್ನು ಬೇರೆ ಬೇರೆ ರಾಜ್ಯಗಳು ಅನುಷ್ಠಾನಕ್ಕೆ ತಂದವು ಮತ್ತು ಅದು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಯೆಡೆಗೆ ಸೆಳೆದದ್ದಂತೂ ಸತ್ಯ. ಈ ನಿಟ್ಟಿನಲ್ಲಿ ಹಲವು ಸಾಧನೆಗಳು ದಾಖಲಾದರೂ, ಹಲವು ತಪ್ಪು ಕಾರಣಗಳಿಗಾಗಿ ಯೋಜನೆ ಸುದ್ದಿಯಾಗುತ್ತಿದೆ. ಸಿಎಜಿ ಇತ್ತೀಚೆಗೆ ಬಿಡುಗಡೆಗೊಳಿಸಿದ ಲೆಕ್ಕಪರಿಶೋಧನಾ ವರದಿಯಲ್ಲಿ ಯೋಜನೆಗೆ ಸಂಬಂಧಿಸಿದ ಹಲವು ಲೋಪದೋಷಗಳು ಬಯಲಾಗಿವೆ. ಶಾಲಾ ಹಾಜರಾತಿ ಅಂಕಿಸಂಖ್ಯೆಗಳಲ್ಲಿ ವೈರುಧ್ಯಗಳು, ಕಳಪೆ ಮೂಲಸೌಕರ್ಯ, ಊಟದಲ್ಲಿ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳಿಲ್ಲದಿರುವುದು ಅವುಗಳಲ್ಲಿ ಮುಖ್ಯವಾದವುಗಳು. ಅದೇ ವೇಳೆ, ಈ ಲೋಪದೋಷಗಳನ್ನು ಸರಿಪಡಿಸಲು ಅದು ಕೆಲವು ಉಪಯುಕ್ತ ಶಿಫಾರಸುಗಳನ್ನೂ ಮಾಡಿದೆ.
ಆದಾಗ್ಯೂ, ಕೆಲವು ಪತ್ರಿಕಾ ವರದಿಗಳು, ಸಿಎಜಿ ವರದಿಯು ಬಿಸಿಯೂಟ ಯೋಜನೆಗೆ ಛೀಮಾರಿ ಹಾಕಿದೆ ಎಂಬಂತೆ ಬಿಂಬಿಸಿದೆ. ಆದರೆ ಅಂತಹದೇನೂ ಸಂಭವಿಸಿಲ್ಲ. ಆರ್ಥಿಕ ಲೆಕ್ಕಪರಿಶೋಧನೆಯಲ್ಲಿ ಬಳಸಲಾಗುವ ಮಾದರಿಯನ್ನೇ ಸಿಎಜಿ ಇಲ್ಲೂ ಮಾಡಿದೆ. ಇದರಲ್ಲಿ ಉತ್ತಮ ಅಂಶಗಳು ಇವೆಯಾದರೂ, ಈ ಪ್ರಕ್ರಿಯೆಯಿಂದ ಯೋಜನೆಯ ಸಮಗ್ರ ವಿಮರ್ಶೆಯಾಗಿದೆ. ಅಂದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಬಿಸಿಯೂಟವನ್ನು ಜಾರಿಗೊಳಿಸಲು ಸಿಎಜಿ ಮಾಗದರ್ಶನವನ್ನು ನೀಡಿದೆಯೇ ಹೊರತು, ಯೋಜನೆಯನ್ನು ತಿರಸ್ಕರಿಸಿರುವುದಲ್ಲ. ಯೋಜನೆಯಿಂದಾಗಿ ಮಕ್ಕಳ ದಾಖಲಾತಿ ಪ್ರಮಾಣ, ಶಾಲೆಯಲ್ಲಿ ಮುಂದುವರಿಯುವ ಪ್ರಮಾಣ, ಹಾಜರಾತಿಯಲ್ಲಿ ಮಾತ್ರ ಹೆಚ್ಚಳವಾಗಿರುವುದಿಲ್ಲದೆ, ಶಿಶು ಪೌಷ್ಟಿಕತೆಯಲ್ಲೂ ಧನಾತ್ಮಕ ಪರಿಣಾಮಗಳಾಗಿವೆ ಎಂಬುದನ್ನು ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮಾಡಲಾದ ಹಲವು ಸಂಶೋಧನೆಗಳು ಹೇಳಿವೆ. ಈ ಅಂಶವನ್ನು ಸಿಎಜಿ ವರದಿಯಲ್ಲಿ ಅಲ್ಲಗಳೆಯಲಾಗಿಲ್ಲ.
ಸಿಎಜಿ ಹಲವಾರು ವೌಲಿಕ ಅಂಶಗಳನ್ನು ಶಿಫಾರಸು ಮಾಡಿದೆ. ಆದರೆ, ಈ ಮಾದರಿಯ ಪರಿಶೋಧನೆಯಲ್ಲಿ ಕಾರ್ಯಸಾಧುವಲ್ಲದ ಹಲವು ತೀರ್ಮಾನಗಳಿಗೂ ಬಂದಿದೆ. 2009-13ರ ಅವಧಿಯಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ಅಂಕಿಅಂಶಗಳು ತೋರಿಸಿದ್ದು ಮಕ್ಕಳನ್ನು ಶಾಲೆಗೆ ತರುವ ತನ್ನ ಉದ್ದೇಶ ಸಾಧನೆಯಲ್ಲಿ ಯೋಜನೆ ವಿಫಲವಾಗಿದೆ ಎಂದು ವರದಿ ಹೇಳಿದೆ. ಇದು ಅಸಂಬದ್ಧ. ಯಾಕೆಂದರೆ, ಪ್ರಸ್ತಾಪಿತ ಅವಧಿಯ ಮೊದಲೂ ಬಿಸಿಯೂಟ ಯೋಜನೆ ಜಾರಿಯಲ್ಲಿತ್ತು.
2009ರ ಬಳಿಕ ಸರಕಾರಿ ಶಾಲೆಗಳಿಗೆ ನೋಂದಣಿಯಾಗುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಕ್ಕೂ ಬಿಸಿಯೂಟ ಯೋಜನೆಗೂ ಯಾವುದೇ ಸಂಬಂಧವಿಲ್ಲ. ಸ್ವತಃ ಸಿಎಜಿ ವರದಿಯೇ ಭಾವಿಸುವಂತೆ, ಖಾಸಗಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಮಕ್ಕಳು ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. ಇದೊಂದು ಪ್ರಮುಖ ಕಳವಳವದ ವಿಷಯವಾದರೂ, ಇದಕ್ಕೂ ಮಧ್ಯಾಹ್ನದ ಬಿಸಿಯೂಟಕ್ಕೂ ಸಂಬಂಧವಿಲ್ಲ. ಬದಲಿಗೆ, ಮಕ್ಕಳನ್ನು ಸರಕಾರಿ ಶಾಲೆಯಿಂದ ದೂರ ತಳ್ಳುವ ಶಿಕ್ಷಕರ ಗೈರುಹಾಜರಾತಿ, ಸೀಮಿತ ತರಗತಿ ಚಟುವಟಿಕೆಗಳು, ಮಕ್ಕಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವಿಕೆಯ ಕೊರತೆ, ದೈಹಿಕ ಶಿಕ್ಷೆ, ಕಳಪೆ ಮೂಲಸೌಕರ್ಯ ಮತ್ತು ಜಾತಿ ಅಥವಾ ಲಿಂಗ ತಾರತಮ್ಯ ಮುಂತಾದ ಇತರ ಅಂಶಗಳ ಬಗ್ಗೆ ಗಮನ ಹರಿಸಬೇಕಾದ ಅಗತ್ಯವನ್ನು ಇದು ಪ್ರತಿಪಾದಿಸಿದೆ.
ಇಲ್ಲಿ ಒಂದು ವಿಷಯವನ್ನು ಗಮನದಲ್ಲಿರಿಸ ಬೇಕಾದ ಆವಶ್ಯಕತೆಯಿದೆ. ಶಾಲೆಗಳಿಗೆ ಮಕ್ಕಳು ದಾಖಲಾಗುವ ಪ್ರಮಾಣವನ್ನು ಹೆಚ್ಚಿಸುವುದು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಒಂದು ಉದ್ದೇಶ ಮಾತ್ರ. ಮಕ್ಕಳ ಆಹಾರ ಹಕ್ಕನ್ನು ರಕ್ಷಿಸುವುದು, ತರಗತಿಯಲ್ಲಿ ಹಸಿವನ್ನು ನೀಗಿಸಿ ಶೈಕ್ಷಣಿಕ ನಿರ್ವಹಣೆಯನ್ನು ಹೆಚ್ಚಿಸುವುದು, ಸಾಮಾಜಿಕ ಸಮಾನತೆಯನ್ನು ಸ್ಥಾಪಿಸುವುದು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ನೀಡುವುದು ಮುಂತಾದ ಉದ್ದೇಶಗಳನ್ನೂ ಯೋಜನೆ ಹೊಂದಿದೆ. ಈ ಗುರಿಗಳನ್ನು ಸಾಧಿಸುವಲ್ಲಿ ಯೋಜನೆ ನೀಡಿರುವ ಕೊಡುಗೆಯನ್ನೂ ನಾವು ಗುರುತಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಸಿಯೂಟದಲ್ಲಿ ಮೊಟ್ಟೆ, ಮೀನಿನಂತಹ ಪೌಷ್ಟಿಕ ಆಹಾರಗಳನ್ನು ನೀಡುವ ಬಗ್ಗೆ ನಾವು ಯೋಚಿಸಬೇಕು. ಆಹಾರವನ್ನು ಇನ್ನಷ್ಟು ಪೌಷ್ಟಿಕಗೊಳಿಸುವುದಕ್ಕಾಗಿ ಅಡುಗೆ ವೆಚ್ಚವನ್ನು ಪರಿಷ್ಕರಿಸಬೇಕು ಎಂದು ಸಿಎಜಿ ಪ್ರಸ್ತಾಪಿಸಿದೆ. ಇದನ್ನು ಸರಕಾರ ಗಮನಕ್ಕೆ ತೆಗೆದುಕೊಳ್ಳಬೇಕು. ಬಿಸಿಯೂಟದ ಉದ್ದೇಶವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಸಿಎಜಿ ವರದಿಯನ್ನು ಸರಕಾರ ಬಳಸಿಕೊಳ್ಳಬೇಕಾಗಿದೆ.







