ಚೆನ್ನೈ ಓಪನ್: ವಾವ್ರಿಂಕ ಹ್ಯಾಟ್ರಿಕ್
.jpg)
ಚೆನ್ನೈ, ಜ.10: ಸ್ವಿಸ್‌ನ ಸ್ಟಾರ್ ಆಟಗಾರ ಸ್ಟಾನ್ ವಾವ್ರಿಂಕ ರವಿವಾರ ಚೆನ್ನೈನಲ್ಲಿ ನಡೆದ 20ನೆ ಆವೃತ್ತಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದಾರೆ.
ರವಿವಾರ ನಡೆದ 425,535 ಡಾಲರ್ ಬಹುಮಾನ ಮೊತ್ತದ ಚೆನ್ನೈ ಓಪನ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ವಾವ್ರಿಂಕ ಅವರು ಕ್ರೊವೇಷಿಯದ ಬೊರ್ನಾ ಕೊರಿಕ್‌ರನ್ನು 6-3, 7-5 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ವಿಶ್ವದ ನಂ.4ನೆ ಆಟಗಾರ ವಾವ್ರಿಂಕ 19ರ ಹರೆಯದ ಕೊರಿಕ್ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸಿದರು. ಕೊರಿಕ್ ವಿರುದ್ಧ ಆಡಿರುವ ಮೂರೂ ಪಂದ್ಯಗಳನ್ನು ಜಯಿಸಿದರು.
ವಾವ್ರಿಂಕ ಚೆನ್ನೈ ಓಪನ್‌ನಲ್ಲಿ 12ನೆ ಪಂದ್ಯಗಳನ್ನು ಜಯಿಸುವುದರೊಂದಿಗೆ ನಾಲ್ಕನೆ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 2011, 2014 ಹಾಗೂ 2015ರಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿರುವ ವಾವ್ರಿಂಕ 2013ರಲ್ಲಿ ಫ್ರೆಂಚ್‌ನ ಬೆನಾಯ್ಟೆ ಪೈರ್ ಜೊತೆಗೂಡಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.
ವಾವ್ರಿಂಕ ಮೊದಲ ಸೆಟ್‌ನಲ್ಲಿ ಎಲ್ಲ ಸರ್ವಿಸ್ ಗೇಮ್ಸ್‌ಗಳನ್ನು ಜಯಿಸಿದರು. ವಿಶ್ವದ 44ನೆ ರ್ಯಾಂಕಿನ ಯುವ ಆಟಗಾರ ಕೊರಿಕ್ ಎರಡನೆ ಸೆಟ್‌ನಲ್ಲಿ ವಾವ್ರಿಂಕಗೆ ಸ್ಪರ್ಧೆ ಒಡ್ಡಿದರು. ಆದರೆ, ತನ್ನೆಲ್ಲಾ ಅನುಭವವನ್ನು ಬಳಸಿಕೊಂಡ ಫ್ರೆಂಚ್ ಓಪನ್ ಚಾಂಪಿಯನ್ ವಾವ್ರಿಂಕ ಚೆನ್ನೈನಲ್ಲಿ ಮತ್ತೊಂದು ಪ್ರಶಸ್ತಿಯನ್ನು ಜಯಿಸಿದರು.
ಚೆನ್ನೈ ಓಪನ್‌ನಲ್ಲಿ ಚಾಂಪಿಯನ್ ಆಗಿರುವ ವಾವ್ರಿಂಕ ಮುಂಬರುವ ವರ್ಷದ ಮೊದಲ ಪ್ರಮುಖ ಟೂರ್ನಿ ಆಸ್ಟ್ರೇಲಿಯನ್ ಓಪನ್‌ಗೆ ಉತ್ತಮ ತಯಾರಿ ನಡೆಸಿದರು.







