ಐಸಿಸಿ ರ್ಯಾಂಕಿಂಗ್: ಭಾರತಕ್ಕೆ ದ್ವಿತೀಯ ಸ್ಥಾನ ಉಳಿಸಿಕೊಳ್ಳುವ ಅವಕಾಶ
ದುಬೈ, ಜ.10: ಟೀಮ್ ಇಂಡಿಯಾ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನ ಭದ್ರಪಡಿಸಿಕೊಳ್ಳಲು ಕನಿಷ್ಠ ಒಂದು ಪಂದ್ಯವನ್ನು ಜಯಿಸಬೇಕಾಗಿದೆ.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡ ಮಂಗಳವಾರ ಪರ್ತ್‌ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಐಸಿಸಿ ರ್ಯಾಂಕಿಂಗ್‌ನಲ್ಲಿ 127 ಅಂಕ ಗಳಿಸಿರುವ ಆಸ್ಟ್ರೇಲಿಯ ಮೊದಲ ಸ್ಥಾನದಲ್ಲಿದೆ.
ಎರಡನೆ ಸ್ಥಾನದಲ್ಲಿರುವ ಭಾರತ(114) ಆಸ್ಟ್ರೇಲಿಯಕ್ಕಿಂತ 13 ಅಂಕ ಹಿಂದಿದೆ. ಒಂದು ವೇಳೆ ಆಸ್ಟ್ರೇಲಿಯ ತಂಡ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನೂ ಸೋತರೂ ಅಂಕವನ್ನು ಕಳೆದುಕೊಳ್ಳಲಿದೆಯೇ ಹೊರತು ಮೊದಲ ಸ್ಥಾನವನ್ನು ಕಳೆದುಕೊಳ್ಳಲಾರದು.
ಒಂದು ವೇಳೆ ಭಾರತ ಸರಣಿಯ ಎಲ್ಲ 5 ಪಂದ್ಯಗಳಲ್ಲಿ ಸೋತರೆ ನಾಲ್ಕನೆ ಸ್ಥಾನಕ್ಕೆ ಜಾರಲಿದ್ದು, ನ್ಯೂಝಿಲೆಂಡ್ ತಂಡವನ್ನು ಸೇರಿಕೊಳ್ಳುತ್ತದೆ. ಐಸಿಸಿ ಆಟಗಾರರ ರ್ಯಾಂಕಿಂಗ್‌ನಲ್ಲಿ ಭಾರತದ ಮೂವರು ದಾಂಡಿಗರು ಅಗ್ರ 10ರಲ್ಲಿದ್ದಾರೆ. ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ 10ನೆ ಸ್ಥಾನದಲ್ಲಿದ್ದಾರೆ.
ಭಾರತದ ಉಪ ನಾಯಕ ವಿರಾಟ್ ಕೊಹ್ಲಿ ರ್ಯಾಂಕಿಂಗ್‌ನಲ್ಲಿ 2ನೆ ಸ್ಥಾನದಲ್ಲಿದ್ದಾರೆ. ಮೊದಲ ರ್ಯಾಂಕ್‌ನಲ್ಲಿರುವ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್‌ಗಿಂತ 96 ಅಂಕ ಹಿಂದಿದ್ದಾರೆ. ಸರಣಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೆ ಎರಡನೆ ಸ್ಥಾನವನ್ನುಉಳಿಸಿಕೊಳ್ಳಬಹುದು. ಮಾತ್ರವಲ್ಲ ಮೊದಲ ಸ್ಥಾನಕ್ಕೂ ಸ್ಪರ್ಧೆ ಒಡ್ಡಬಹುದು.
ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಆರ್. ಅಶ್ವಿನ್ ಆಸೀಸ್ ವಿರುದ್ಧದ ಸರಣಿಯಲ್ಲಿ ಅಗ್ರ ರ್ಯಾಂಕಿನ ಆಟಗಾರನಾಗಿದ್ದಾರೆ. ನಂ.1 ಬೌಲರ್ ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯ ಕಾರಣ ಅಶ್ವಿನ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಅಶ್ವಿನ್ ಪ್ರಸ್ತುತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಬೌಲರ್ ಆಗಿದ್ದಾರೆ. ಏಕದಿನದಲ್ಲಿ 10ನೆ ಸ್ಥಾನದಲ್ಲಿರುವ ಅವರು ಐದನೆ ಸ್ಥಾನಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.







