ಸೋನಿಯಾ-ಮೆಹಬೂಬ ಭೇಟಿ: 'ಕೈ' ಜೋಡಿಸಲು ಸಿದ್ಧ?

ರಾಜಕೀಯ ವಲಯದಲ್ಲಿ ಕುತೂಹಲ
ಶ್ರೀನಗರ,ಜ.10: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರವಿವಾರ ಇಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿಯವರನ್ನು ಭೇಟಿಯಾಗಿದ್ದು, ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ನಿಧನದ ಬಳಿಕ ಜಮ್ಮು-ಕಾಶ್ಮೀರದಲ್ಲಿನ ಕ್ಷಿಪ್ರಗತಿಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿಯು ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.
ಮಧ್ಯಾಹ್ನ ಮೂರು ಗಂಟೆಗೆ ದಿಲ್ಲಿಯಿಂದ ಆಗಮಿಸಿದ ಸೋನಿಯಾ ವಿಮಾನ ನಿಲ್ದಾಣದಿಂದ ನೇರವಾಗಿ ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ಮೆಹಬೂಬರ ‘ಫೇರ್‌ವ್ಯೆ’ ನಿವಾಸಕ್ಕೆ ತೆರಳಿದರು. ಅವರು ಅಲ್ಲಿ ಸುಮಾರು 20 ನಿಮಿಷಗಳ ಕಾಲವಿದ್ದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್,ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ರಾಜ್ಯ ಕಾಂಗ್ರೆಸ್ ವರಿಷ್ಠ ಜಿ.ಎ.ಮೀರ್ ಮತ್ತು ಪಕ್ಷದ ನಾಯಕ ಸೈಫುದ್ದೀನ್ ಸೋಝ್ ಅವರು ಸೋನಿಯಾ ಅವರೊಂದಿಗಿದ್ದರು.
ಆದರೆ ಯಾವುದೇ ಗುಟ್ಟು ಬಿಟ್ಟುಕೊಡದ ಕಾಂಗ್ರೆಸ್, ಇದು ರಾಜಕೀಯ ಭೇಟಿಯಲ್ಲ ಎಂದು ಹೇಳಿಕೊಂಡಿದೆ.
ಸೋನಿಯಾ ಗಾಂಧಿಯವರ ಭೇಟಿಯು ಮುಫ್ತಿಯವರ ನಿಧನಕ್ಕೆ ಸಂತಾಪ ಸೂಚನೆಯ ಉದ್ದೇಶವನ್ನಷ್ಟೇ ಹೊಂದಿತ್ತು. ಅದರಲ್ಲಿ ಯಾವುದೇ ರಾಜಕೀಯ ಅಜೆಂಡಾ ಅಡಗಿರಲಿಲ್ಲ. ರಾಜ್ಯದಲ್ಲಿಯ ರಾಜಕೀಯ ಬೆಳವಣಿಗೆಗಳ ಕುರಿತು ನೀವು ಮೆಹಬೂಬ ಅವರನ್ನೇ ಕೇಳಬೇಕು ಎಂದು ಭೇಟಿಯ ಬಳಿಕ ಆಝಾದ್ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಯ ಭವಿಷ್ಯದ ಬಗ್ಗೆ ಈಗಾಗಲೇ ಕೆಲವು ಕಳವಳಗಳು ಸೃಷ್ಟಿಯಾಗಿವೆ. ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡಿವೆ ಎಂದು ಹಲವರು ಭಾವಿಸಿದ್ದಾರೆ. ಮುಫ್ತಿ ನಿಧನದ ಬಳಿಕ ಜಮ್ಮು-ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಮೆಹಬೂಬರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆಯನ್ನು ನಡೆಸಿದ್ದರು. ಮೆಹಬೂಬ ಭೇಟಿಯಾಗಲು ಒಪ್ಪಿಕೊಂಡಿದ್ದ ಕೆಲವೇ ಜನರಲ್ಲಿ ಒಬ್ಬರಾಗಿದ್ದ ಬಿಜೆಪಿ ನಾಯಕ ರಾಮ ಮಾಧವ ಕೂಡ ಅವರನ್ನು ಭೇಟಿಯಾಗಿದ್ದರು. ರವಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸಹ ಮುಫ್ತಿ ಕುಟುಂಬಕ್ಕೆ ಸಂತಾಪ ಸೂಚಿಸಲು ಮೆಹಬೂಬರ ನಿವಾಸಕ್ಕೆ ಭೇಟಿ ನೀಡಿದ್ದರು.
ತಾನು ಸಂತಾಪ ವ್ಯಕ್ತಪಡಿಸಲು ಮೆಹಬೂಬರನ್ನು ಭೇಟಿಯಾಗಿದ್ದೆ,ಇದು ರಾಜಕೀಯ ಭೇಟಿಯಲ್ಲ ಎಂದು ಗಡ್ಕರಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಮೆಹಬೂಬ ಅವರು ಬಿಜೆಪಿಯು ಮೈತ್ರಿಯನ್ನು ಮುಂದುವರಿಸಲು ಬಯಸುವುದಾದರೆ ಅದಕ್ಕೆ ಕಠಿಣ ಶರತ್ತುಗಳನ್ನು ಒಡ್ಡಿದ್ದಾರೆಂದು ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ನೀಡಲಾಗುವುದಿಲ್ಲ ಎಂದು ಪಿಡಿಪಿ ಸ್ಪಷ್ಟಪಡಿಸಿದೆಯಲ್ಲದೆ, ಕೇಂದ್ರದಿಂದ ಹೆಚ್ಚಿನ ನೆರವು ಕೇಳಿದೆ. ಜೊತೆಗೆ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ಬಿಜೆಪಿಗೆ ಸೂಚಿಸಿದೆ ಎಂದು ಈ ಮೂಲಗಳು ತಿಳಿಸಿದವು.







