ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್

ಬೆಂಗಳೂರು, ಜ.10: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷ ಕೂಡ ಶಾಸಕರ ವಿದೇಶ ಪ್ರವಾಸಕ್ಕೆ ಅನುಮತಿ ನೀಡದಿರಲು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನಿರ್ಧರಿಸಿದ್ದಾರೆ. ಮತ್ತೊಂದೆಡೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಎದುರಾಗಲಿದ್ದು, ಇದೂ ಪ್ರವಾಸಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಸಕರ ವಿವಿಧ ಸದನ ಸಮಿತಿಗಳಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿರಲಿಲ್ಲ. ಈ ಬಾರಿ ಕೂಡ ಬರ ಇದ್ದು, ರಾಜ್ಯದ ಹಲವೆಡೆ ಕುಡಿಯುವ ನೀರು, ಜಾನುವಾರಗಳ ಮೇವಿಗೆ ಹಾಹಾಕಾರ ಎದ್ದಿದೆ. ಹೀಗಿರುವಾಗ ಪ್ರವಾಸ ಬೇಡ ಎನ್ನುವ ನಿಲುವು ಸಭಾಧ್ಯಕ್ಷರದ್ದಾಗಿದೆ. ಆದರೆ ವಿದೇಶ ಪ್ರವಾಸಕ್ಕೆ ಶಾಸಕರಿಂದ ತೀವ್ರ ಒತ್ತಡ ಕೇಳಿ ಬಂದಿದೆ. ಐದು ವರ್ಷಗಳಲ್ಲಿ ಒಂದು ಬಾರಿ ಮಾತ್ರ ವಿದೇಶ ಪ್ರವಾಸಕ್ಕೆ ಅವಕಾಶವಿದೆ.
ಈ ಬಾರಿ ನಮ್ಮ ಸಮಿತಿಗೆ ಅನುಮತಿ ನೀಡಿ ಎಂದು ಕೋರುತ್ತಿದ್ದಾರೆ. ಆದರೆ ಸಭಾಧ್ಯಕ್ಷರು ಇದನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಹಿಂದೆ ಶಾಸಕರು ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಜನ ಪ್ರತಿನಿಧಿಗಳ ವರ್ತನೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವ ಶಾಸಕರು ನಂತರ ಯಾವುದೇ ರೀತಿಯ ಅಧ್ಯಯನ ವರದಿ ಸಲ್ಲಿಸದ ಬಗ್ಗೆಯೂ ಆಕ್ಷೇಪ ಕೇಳಿ ಬಂದಿತ್ತು. ಇದು ಕೇವಲ ಮೋಜಿನ ಪ್ರವಾಸ ಎನ್ನುವ ಟೀಕೆಗೆ ಒಳಗಾಗಿತ್ತು.
ಇದೇ ಕಾರಣದಿಂದ ಶಾಸಕರ ವಿದೇಶ ಪ್ರವಾಸ ಕುರಿತು ಸಭಾಧ್ಯಕ್ಷರು ವಿಧಾನಸಭಾ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಪ್ರವಾಸದ ಉದ್ದೇಶ, ಅದರ ಫಲಶೃತಿ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಸಮಿತಿ ಸಮಗ್ರವಾಗಿ ಅಧ್ಯಯನ ನಡೆಸಿ ಪ್ರವಾಸ ಕೈಗೊಂಡ ಶಾಸಕರು ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಅಂತಹ ವರದಿಯಲ್ಲಿನ ಉತ್ತಮ ಅಂಶಗಳನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸುವಂತಿರಬೇಕು ಎನ್ನುವ ಸಲಹೆ ನೀಡಿತ್ತು. ಜತೆಗೆ ವಿದೇಶ ಪ್ರವಾಸಕ್ಕಾಗಿ ಮಾಡುತ್ತಿರುವ ಅಧಿಕ ವೆಚ್ಚಕ್ಕೆ ಕಡಿವಾಣ ಹಾಕುವಂತೆಯೂ ಸಲಹೆ ನೀಡಿತ್ತು.
ಶಾಸಕರ ವಿದೇಶ ಪ್ರವಾಸ ಎಂದರೆ ಕೆಲವು ಖಾಸಗಿ ಟ್ರಾವೆಲ್ ಸಂಸ್ಥೆಗಳಿಗೆ ಹಬ್ಬವಾಗಿ ಮಾರ್ಪಟ್ಟಿತ್ತು. ಇಲ್ಲಸಲ್ಲದ ಖರ್ಚುವೆಚ್ಚಗಳನ್ನು ತೋರಿಸಿ ಲೂಟಿ ಮಾಡುತ್ತಿದ್ದವು. ಈ ಬಗ್ಗೆಯೂ ಬೆಳಕು ಚೆಲ್ಲಿದ್ದ ಸಮಿತಿ, ಖರ್ಚಿನ ಮೇಲೆ ನಿಯಂತ್ರಣ ಹೇರುವ ಹಲವು ಮಾರ್ಗೋಪಾಯಗಳನ್ನು ಅನುಸರಿಸುವಂತೆ ಸಮಿತಿ ಸಲಹೆ ಮಾಡಿತ್ತು. ಎಲ್ಲವನ್ನೂ ಪರಿಶೀಲನೆ ನಡೆಸಿದ ಸಮಿತಿ ವಿದೇಶ ಪ್ರವಾಸ ಕೈಗೊಳ್ಳುವ ಶಾಸಕರು ಕಡ್ಡಾಯವಾಗಿ ಸದನಕ್ಕೆ ವರದಿ ಸಲ್ಲಿಸಬೇಕು. ಜತೆಗೆ ಖಾಸಗಿ ಪ್ರವಾಸಿ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಬೇಕು. ಪ್ರವಾಸಕ್ಕೆ ಇಂತಿಷ್ಟೇ ವೆಚ್ಚ ಮಾಡಬೇಕೆಂದು ಶಿಫಾರಸು ಮಾಡಿತ್ತು.
ಈ ಎಲ್ಲಾ ಶಿಫಾರಸುಗಳನ್ನು ಇದೀಗ ಜಾರಿಗೊಳಿಸಿದ್ದು, ಪ್ರವಾಸಕ್ಕೆ ತೆರಳಿದ ಶಾಸಕರು ತಮ್ಮ ಅನುಭವಗಳು ಮತ್ತು ಅನುಷ್ಠಾನಯೋಗ್ಯ ಶಿಫಾರಸುಗಳನ್ನು ಸರ್ಕಾರಕ್ಕೆ ವರದಿ ನೀಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಜತೆಗೆ ಖರ್ಚುವೆಚ್ಚಗಳ ಮೇಲೂ ನಿಯಂತ್ರಣ ಹೇರಲಾಗಿದೆ.







