ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‌ಶಿಪ್‌ಗೆ ಚಾಲನೆ

ಮೂಡುಬಿದಿರೆ, ಜ.10: ಇದುವರೆಗೆ ಕೇವಲ ಆರೋಗ್ಯಕ್ಕೆ ಮಾತ್ರ ಸಂಬಂಧಿಸಿದ್ದು ಎಂಬಂತಿದ್ದ ಯೋಗವನ್ನು ಇದೀಗ ಕೇಂದ್ರ ಸರಕಾರ ಆದ್ಯತೆಯ ಕ್ರೀಡೆಯಾಗಿ ಗುರುತಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಯುವಜನತೆ ತಮ್ಮ ಯೋಗ ಸಾಮರ್ಥ್ಯವನ್ನು ಪ್ರದರ್ಶಿಸುವುದರ ಜೊತೆಗೆ ದೇಶದ ಪ್ರತಿಷ್ಠೆಯನ್ನು ಎತ್ತರಕ್ಕೇರಿಸುವ ಸಾಧನೆ ಮಾಡಬೇಕಾಗಿದೆ. ಈ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲೂ ಯೋಗವನ್ನು ಕಾಣುವಂತಾಗಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಯೋಗ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ವತಿ ಯಿಂದ ಮಂಗಳೂರಿನ ಶ್ರೀಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರವಿವಾರ ಆರಂಭಗೊಂಡ ನಾಲ್ಕು ದಿನಗಳ 40ನೆ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಯುವಜನ ಸೇವೆ ಮತ್ತು ಕ್ರೀಡೆ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಆರೋಗ್ಯದ ಬಗ್ಗೆ ಗಮನ ನೀಡುವವರು ಯೋಗದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು. ಯೋಗ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಶೋಕ್‌ಕುಮಾರ್ ಅಗರವಾಲ್ ಮಾತನಾಡಿ, ಈ ವರ್ಷ ವರ್ಲ್ಡ್ ಯೋಗ ಲೀಗ್ ನಡೆಸುವ ಯೋಜನೆ ರೂಪಿಸಲಾ ಗಿದೆ ಎಂದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದೇವಿಪ್ರಸಾದ್ ಶೆಟ್ಟಿ, ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ. ಕುರಿಯನ್, ಯೋಗ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಾಧ್ಯಕ್ಷ ದಿಯೋದತ್ತ, ಹಿರಿಯ ಉಪಾ ಧ್ಯಕ್ಷರಾದ ಇಂದೂ ಅಗರ್‌ವಾಲ್, ಎಸ್.ಪಿ. ಶಾಕೀನ್, ವಲಯ ಕಾರ್ಯದರ್ಶಿಗಳಾದ ಕೆ. ಪ್ರಭು, ಡಾ.ಆಸಿತ್ ಎಚ್., ರಮಣ್‌ಕುಮಾರ್, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಎಂ.ಜಿ. ಅಮರನಾಥ್, ಶ್ರೀಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಜಿ.ದೇವಿಕಾ ಪುರುಷೋತ್ತಮ್, ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಯೋಗ ನಿರ್ದೇಶಕ ಡಾ.ಶಶಿಕಾಂತ ಜೈನ್, ಬ್ಲೋಸಮ್‌ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಗಂಗಾಧರಪ್ಪಸ್ವಾಗತಿಸಿದರು. ಶ್ರೀಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಕೆ.ನಾರಾಯಣ ಶೆಟ್ಟಿ ವಂದಿಸಿದರು. ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಧ್ಯಾಪಕಿ ಡಾ.ವಿದ್ಯಾರಾಣಿ ಕಾರ್ಯ ಕ್ರಮ ನಿರ್ವಹಿಸಿದರು.





