ಸಿರಿಯದ ಯುದ್ಧ ಪೀಡಿತ ನಗರಗಳಿಗೆ ಆಹಾರ ಪೂರೈಕೆಗೆ ಒಪ್ಪಂದ
ಡಮಾಸ್ಕಸ್,ಜ.10: ಸಹಸ್ರಾರು ಮಂದಿ ನಾಗರಿಕರು ಹಸಿವಿನಿಂದ ಸಾಯುವ ಪರಿಸ್ಥಿತಿಯಿರುವ, ಐಸಿಸ್ ಉಗ್ರರ ದಿಗ್ಬಂಧನದಲ್ಲಿರುವ ನಗರಗಳಿಗೆ ಆಹಾರ ಹಾಗೂ ಔಷಧಿಯನ್ನು ಪೂರೈಕೆ ಮಾಡಲು ಒಪ್ಪಂದವೊಂದು ಏರ್ಪಟ್ಟಿರುವುದಾಗಿ ನೆರವು ಸಂಸ್ಥೆಗಳು ರವಿವಾರ ತಿಳಿಸಿವೆ. ಈ ಒಪ್ಪಂದದಿಂದಾಗಿ ಉಗ್ರರ ಹಿಡಿತದಲ್ಲಿರುವ ಲೆಬನಾನ್ ಗಡಿಭಾಗದ ನಗರವಾದ ಮಡಾಯ ಹಾಗೂ ವಾಯವ್ಯ ಭಾಗದ ಪ್ರಾಂತದಲ್ಲಿರುವ ಎರಡು ಹಳ್ಳಿಗಳಿಗೆ ಮಾನವೀಯ ನೆರವಿನ ಸಾಮಗ್ರಿಗಳನ್ನು ಪೂರೈಕೆ ಮಾಡಲು ಸಾಧ್ಯವಾಗಲಿದೆ. ಮಡಾಯದಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಆಹಾರ, ನೀರಿಲ್ಲದೆ ನರಳುತ್ತಿದ್ದು ಸಾಯುವ ಸ್ಥಿತಿಗೆ ತಲುಪಿದ್ದಾರೆಂದು ನೆರವು ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ಉಗ್ರರ ವಶದಲ್ಲಿರುವ ಈ ಮೂರು ಪ್ರದೇಶಗಳಿಗೂ ಆಹಾರ ಹಾಗೂ ಆವಶ್ಯಕ ವಸ್ತುಗಳ ಪೂರೈಕೆಗೆ ಅವಕಾಶ ನೀಡಲು ಸಿರಿಯ ಸರಕಾರ ಒಪ್ಪಿಕೊಂಡಿದೆ. ಆದರೆ ಅವುಗಳನ್ನು ಯಾವಾಗ ಪೂರೈಕೆ ಮಾಡಲಾಗುವುದು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.
ಉಗ್ರರ ವಶದಲ್ಲಿರುವ ಪ್ರದೇಶಗಳಲ್ಲಿ ಆಹಾರವಿಲ್ಲದೆ ಹಸಿದು, ಬಡಕಲಾಗಿರುವ ಮಕ್ಕಳ ಚಿತ್ರಗಳು ಮಾಧ್ಯಮ ಗಳಲ್ಲಿ ಪ್ರಸಾರವಾದ ಬಳಿಕ, ವಿಶ್ವದಾದ್ಯಂತ ವ್ಯಾಪಕ ಕಳವ ಳಗಳು ವ್ಯಕ್ತವಾಗಿದ್ದವು. ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ರಶ್ಯನ್ ಪಡೆಗಳು ನಡೆಸಿದ ಸರಣಿ ವಾಯುದಾಳಿಗಳಲ್ಲಿ ಭಾರೀ ಸಂಖ್ಯೆಯ ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಮಾರಾತ್ ಉಲ್ ನುಮಾನ್ ನಗರದಲ್ಲಿ ಶನಿವಾರ ರಶ್ಯ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿ ದ್ದಾರೆಂದು ಸ್ವಯಂಸೇವಾಸಂಸ್ಥೆಯಾದ ‘ಸಿರಿಯಾ ಸಿವಿಲ್‌ಡಿಫೆನ್ಸ್’ ತಿಳಿಸಿದೆ.