ಟ್ರಂಪ್ ರ್ಯಾಲಿಯಿಂದ ಮುಸ್ಲಿಮ್ ಮಹಿಳೆಯ ಉಚ್ಚಾಟನೆ
ವಾಷಿಂಗ್ಟನ್, ಜ.10: ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಮುಂಚೂಣಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಚುನಾವಣಾ ರ್ಯಾಲಿಯಲ್ಲಿ ಮುಸ್ಲಿಮ್ ಮಹಿಳೆಯೊಬ್ಬರನ್ನು ಹೊರ ದಬ್ಬಿದ ಘಟನೆಯೊಂದು ವರದಿಯಾಗಿದೆ.
ಅಮೆರಿಕದಲ್ಲಿ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕೆಂಬ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಯ ವಿರುದ್ಧ ವೌನ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೋಸ್ ಹಾಮಿದ್ (56) ಎಂಬ ಮಹಿಳೆ ಯನ್ನು ಟ್ರಂಪ್ ಬೆಂಬಲಿಗರು ರ್ಯಾಲಿಯಿಂದ ಹೊರಕ್ಕೆ ಎಳೆದೊಯ್ದರು ಎಂದು ವರದಿ ತಿಳಿಸಿದೆ.
ಶಿರವಸ್ತ್ರ ಹಾಗೂ ‘ಸಲಾಮ್, ಐ ಕಮ್ ಇನ್ ಪೀಸ್’ ಎಂಬ ಬರಹದ ಸಡಿಲ ಹಸಿರು ಬಣ್ಣದ ಶರ್ಟ್ ತೊಟ್ಟಿದ್ದ ವಿಮಾನ ಪರಿಚಾರಕಿ ರೋಸ್ ಹಾಮಿದ್, ಕುಳಿತಿದ್ದ ಸಭಿಕರ ನಡುವೆ ಭಾಷಣ ಪೀಠದತ್ತ ವೌನದಿಂದ ಎದ್ದುನಿಂತು ನೋಡುತ್ತಿರುವ ಸೌತ್ ಕೆರೊಲಿನಾದಲ್ಲಿ ನಡೆದ ಸಮಾರಂಭದ ದೃಶ್ಯಾವಳಿಯನ್ನು ಟಿವಿ ವಾಹಿನಿಯೊಂದು ಬಿತ್ತರಿಸಿದೆ.
ವೌನ ಪ್ರತಿಭಟನೆಗೆ ಮುಂದಾದ ಮಹಿಳೆಯ ಮುಖಕ್ಕೆ ರಾಚುವಂತೆ ಟ್ರಂಪ್ ಹೆಸರಿನ ಭಿತ್ತಿಪತ್ರಗಳನ್ನು ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಿಡಿದಿರುವ ಹಾಗೂ ಟ್ರಂಪ್‌ಗೆ ಜಯಘೋಷ ಹಾಕುತ್ತ ಮಹಿಳೆಯನ್ನು ಸಭೆಯಿಂದ ಹೊರಕ್ಕೊಯ್ದ ಸನ್ನಿವೇಶವನ್ನು ವಾಹಿನಿ ಬಿತ್ತರಿಸಿದೆ.
‘‘ನಿನ್ನಲ್ಲಿ ಬಾಂಬ್ ಇದೆ. ನಿನ್ನಲ್ಲಿ ಬಾಂಬ್ ಇದೆ’’ ಎಂದು ಟ್ರಂಪ್‌ರ ಬೆಂಬಲಿಗನೋರ್ವನು ತನ್ನನ್ನು ಉದ್ದೇಶಿಸಿ ಕಿರುಚತೊಡಗಿದನು ಎಂದು ಹಾಮಿದ್ ಹೇಳುತ್ತಾರೆ. ‘‘ಟ್ರಂಪ್‌ರ ವಿಕೃತ ಮನೋಭಾವ ಇಷ್ಟು ಬೇಗನೆ ಹೊರಬಿದ್ದಂತಾಗಿದೆ ಮತ್ತು ಇದು ಅತ್ಯಂತ ಭಯಾನಕ ವಿಷಯ’’ ಎಂದು ಶುಕ್ರವಾರ ರಾತ್ರಿ ನಡೆದ ರ್ಯಾಲಿಯ ಬಳಿಕ ಸಿಎನ್‌ಎನ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಾಮಿದ್ ವಿವರಿಸಿದ್ದಾರೆ.
‘‘ಮುಸ್ಲಿಮ್ ಮಹಿಳೆಯೊಬ್ಬರನ್ನು ನಿಂದನೆಗೊಳಪಡಿಸಿ ರಾಜಕೀಯ ರ್ಯಾಲಿಯೊಂದರಿಂದ ಹೊರದಬ್ಬಿರುವ ಘಟನೆಯು ಅಮೆರಿಕನ್ ಮುಸ್ಲಿಮರಿಗೆ ಭಯಾನಕ ಸಂದೇಶವಾಗಿದೆ’’ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್(ಸಿಎಐರ್) ನ ಕಾರ್ಯ ನಿರ್ವಾಹಕ ನಿರ್ದೇಶಕ ನಿಹಾದ್ ಅವಾದ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ಹಾಮಿದ್‌ರ ಕ್ಷಮೆ ಯಾಚಿಸಬೇಕೆಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.