ಹೈಡ್ರೋಜನ್ ಬಾಂಬ್ ಪರೀಕ್ಷೆ: ಕಿಮ್ ಸಮರ್ಥನೆ

ಸಿಯೋಲ್,ಜ.10: ತನ್ನ ದೇಶದ ಚೊಚ್ಚಲ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಸಮರ್ಥಿಸಿದ್ದಾರೆ. ಅಮೆರಿಕದ ಜೊತೆ ಅಣ್ವಸ್ತ್ರ ಸಮರವನ್ನು ತಡೆಗಟ್ಟುವ ಉದ್ದೇಶದಿಂದ, ಆತ್ಮರಕ್ಷಣೆಗಾಗಿ ಉತ್ತರ ಕೊರಿಯ ಹೈಡ್ರೋಜನ್ ಬಾಂಬ್‌ನ ಪರೀಕ್ಷೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಉತ್ತರ ಕೊರಿಯವು ತಥಾಕಥಿತ ಹೈಡ್ರೋಜನ್ ಬಾಂಬ್ ಪರೀಕ್ಷಿಸಿದ ಬಳಿಕ ನೀಡಿದ ಕಿಮ್ ನೀಡಿದ ಚೊಚ್ಚಲ ಹೇಳಿಕೆ ಇದಾಗಿದೆ.
ಉತ್ತರಕೊರಿಯ ಕಳೆದ ಬುಧವಾರ ತನ್ನ ನಾಲ್ಕನೆ ಪರಮಾಣು ಪರೀಕ್ಷೆಯನ್ನು ನಡೆಸಿರುವುದು ಅಂತಾ ರಾಷ್ಟ್ರೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ನೆರೆಯ ರಾಷ್ಟ್ರವಾದ ದಕ್ಷಿಣ ಕೊರಿಯ ಕೂಡಾ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಖಂಡಿಸಿದೆ.
‘‘ಕೊರಿಯ ಪರ್ಯಾಯದ್ವೀಪದಲ್ಲಿ ಶಾಂತಿಯನ್ನು ಕಾಪಾಡಲು ಹಾಗೂ ಅಮೆರಿಕ ನೇತೃತ್ವದ ಸಾಮ್ರಾಜ್ಯ ಶಾಹಿಗಳಿಂದ ಉಂಟಾಗಿರುವ ಅಣ್ವಸ್ತ್ರ ಸಮರದ ಅಪಾಯ ದಿಂದ ಪ್ರಾದೇಶಿಕ ಭದ್ರತೆಯನ್ನು ನೆಲೆಗೊಳಿಸಲು ಕೈಗೊಳ್ಳಲಾದ ಆತ್ಮರಕ್ಷಣೆಯ ನಡೆ ಇದಾಗಿದೆ’’ ಎಂದು ಕಿಮ್ ಹೇಳಿರುವುದಾಗಿ, ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
ಅಣ್ವಸ್ತ್ರ ಪರೀಕ್ಷೆಯು ಸಾರ್ವಭೌಮ ದೇಶದ ಕಾನೂನು ಬದ್ಧ ಹಕ್ಕಾಗಿದೆ. ಒಂದು ನ್ಯಾಯಯುತವಾದ ಕಾರ್ಯ ವನ್ನು ಯಾರೂ ಟೀಕಿಸುವಂತಿಲ್ಲ ಎಂದವರು ಹೇಳಿದ್ದಾರೆ. ಉತ್ತರ ಕೊರಿಯದ ಜನತಾ ಸೇನೆಯ ಪ್ರತಿಯೊಂದು ವಿಧದಲ್ಲೂ ತನ್ನ ಮಿಲಿಟರಿ ಹಾಗೂ ರಾಜಕೀಯ ಬಲಾಢ್ಯತೆಯನ್ನು ಹೆಚ್ಚಿಸಲು ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಉತ್ತರ ಕೊರಿಯದ ಜನತಾ ಸಶಸ್ತ್ರ ಪಡೆ ಗಳ ಸಚಿವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಿಮ್ ಈ ಹೇಳಿಕೆ ನೀಡಿರುವುದಾಗಿ ಕೆಸಿಎನ್‌ಎ ತಿಳಿಸಿದೆ. ಆದರೆ ಅವರು ಭೇಟಿ ನೀಡಿದ ದಿನಾಂಕವನ್ನು ಉಲ್ಲೇಖಿಸಿಲ್ಲ.
ಉತ್ತರ ಕೊರಿಯ ಸರಕಾರ ಶುಕ್ರವಾರ ಬಿಡುಗಡೆ ಗೊಳಿಸಿದ ಅಧಿಕೃತ ಹೇಳಿಕೆಯು ಕೂಡಾ ಕಿಮ್ ಅವರ ಅನಿಸಿಕೆಗಳನ್ನೇ ಪ್ರತಿಧ್ವನಿಸಿದೆ. ಅಣುಶಕ್ತಿಯನ್ನು ಸಂಪಾ ದಿಸುವ ಮಹತ್ವಾಕಾಂಕ್ಷೆಯನ್ನು ರಾಷ್ಟ್ರಗಳು ತ್ಯಜಿಸಿದಲ್ಲಿ, ಅವುಗಳ ಗತಿ ಏನಾಗಲಿದೆ ಎಂಬುದಕ್ಕೆ ಇರಾಕ್‌ನ ಸದ್ದಾಂ ಹುಸೈನ್ ಹಾಗೂ ಲಿಬಿಯದ ಮುಹಮ್ಮದ್ ಗದಾಫಿ ಉದಾಹರಣೆಯಾಗಿದ್ದಾರೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಉತ್ತರ ಕೊರಿಯದ ಅಣ್ವಸ್ತ್ರ ಪರೀಕ್ಷೆಯು, ಅದರ ಪ್ರಮುಖ ಮಿತ್ರ ಚೀನಾ ಸೇರಿದಂತೆ ವಿಶ್ವದ ಶಕ್ತಿಶಾಲಿ ರಾಷ್ಟ್ರ ಗಳನ್ನು ಕೆರಳಿಸಿದೆ. ಉತ್ತರ ಕೊರಿಯವನ್ನು ದಂಡಿಸಲು ತಾನು ನೂತನ ಕ್ರಮಗಳನ್ನು ಜಾರಿಗೊಳಿಸುವುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿಳಿಸಿದೆ. ಉತ್ತರ ಕೊರಿಯವು, ವಿಭಜಿತ ಪರ್ಯಾಯ ದ್ವೀಪವನ್ನು ಯುದ್ಧದಂಚಿನೆಡೆಗೆ ಕೊಂಡೊಯ್ಯುತ್ತಿದೆಯೆಂದು ನೆರೆಯ ರಾಷ್ಟ್ರವಾದ ದ.ಕೊರಿಯ ಆಕ್ರೋಶ ವ್ಯಕ್ತಪಡಿಸಿದೆ.