ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ನಂ.1

ಲಂಡನ್, ಜ.10: ಬ್ರಿಟನ್‌ನ 11 ವರ್ಷದ ಭಾರತೀಯ ಮೂಲದ ಬಾಲಕಿಯೊಬ್ಬಳು, ಪ್ರತಿಷ್ಠಿತ ‘ಮೆನ್ಸಾ’ ಐಕ್ಯೂ ಪರೀಕ್ಷೆಯಲ್ಲಿ 162 ಅಂಕಗಳನ್ನು ಗಳಿಸುವ ಮೂಲಕ ದೇಶದ ಅಪಾರ ಬುದ್ಧಿಮತ್ತೆಯಿರುವ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿನಿಯೆಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಮುಂಬೈಯಲ್ಲಿ ಜನಿಸಿರುವ ಕಾಶ್ಮಿಯಾ ವಾಹಿ, ಮೆನ್ಸಾ ಪರೀಕ್ಷೆಯಲ್ಲಿ 162ರಲ್ಲಿ 162 ಅಂಕಗಳನ್ನು ಗಳಿಸಿದ್ದು, ಬುದ್ಧಿಮತ್ತೆ ಯಲ್ಲಿ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾಳೆ ಹಾಗೂ ಬ್ರಿಟನ್‌ನ ಅತಿ ಶ್ರೇಷ್ಠ ಪ್ರತಿಭಾವಂತರಲೊಬ್ಬ ಳೆನಿಸಿಕೊಂಡಿದ್ದಾಳೆ. ಐಕ್ಯೂ ಪರೀಕ್ಷೆಯಲ್ಲಿ ನಂ.1 ಸ್ಥಾನ ಪಡೆದಿರುವುದು ತನಗೆ ರೋಮಾಂಚನ ವನ್ನುಂಟು ಮಾಡಿದೆಯೆಂದು ಕಶ್ಮಿಯಾ ತಿಳಿಸಿದ್ದಾರೆ. ‘‘ಸ್ಟೀಫನ್ ಹಾಕಿಂಗ್ ಹಾಗೂ ಅಲ್ಬರ್ಟ್ ಐನ್‌ಸ್ಟೀನ್‌ರಂತಹ ಮಹಾನ್ ವ್ಯಕ್ತಿಗಳೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದು ಅಸಾಧ್ಯವೇ ಸರಿ. ಅಂತಹ ಮಹಾನ್ ವ್ಯಕ್ತಿಗಳ ಸಾಲಿಗೆ ನನ್ನಂತಹ ವ್ಯಕ್ತಿಗಳು ತುಂಬಾ ಸಾಧನೆಗಳನ್ನು ಮಾಡಬೇಕಾಗುತ್ತದೆಯೆಂದು ನಾನು ಭಾವಿಸುತ್ತೇನೆ. ಅದೇನಿದ್ದರೂ ನಾನೀಗ ಪುಳಕಿತಳಾಗಿದ್ದೇನೆ’’ ಎಂದು ಕಾಶ್ಮಿಯಾ ತಿಳಿಸಿದ್ದಾಳೆ.
ಕಾಶ್ಮಿಯಾ, ಡ್ಯೂಶ್ ಬ್ಯಾಕ್‌ನಲ್ಲಿ ಐಟಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್‌ಗಳಾದ ವಿಕಾಸ್ ಹಾಗೂ ಪೂಜಾ ವಾಹಿ ದಂಪತಿಯ ಪುತ್ರಿಯಾಗಿದ್ದಾರೆ. ಕ್ಯಾಟೆಲ್ ಐಐಐ ಬಿ ಮೆನ್ಸಾ ಪರೀಕ್ಷೆಯು ಅತ್ಯಂತ ಪ್ರಸಿದ್ಧವಾದ ಬುದ್ಧಿಮತ್ತೆ ವೌಲ್ಯಮಾಪನದ ಪರೀಕ್ಷೆಯಾಗಿದೆ. ಪಶ್ಚಿಮ ಲಂಡನ್‌ನ ನಾಟಿಂಗ್‌ಹಿಲ್ ಹಾಗೂ ಈಲೀಂಗ್ ಜೂನಿಯರ್ ಸ್ಕೂಲ್‌ನ ವಿದ್ಯಾರ್ಥಿನಿಯಾದ ಕಾಶ್ಮಿಯಾ, ಕಳೆದ ವರ್ಷ ಆಕ್ಸ್‌ಫರ್ಡ್ ಗಣಿತ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಪಡೆದಿ ದ್ದಳು. ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರುವ ಆಕೆ ನೆಟ್‌ಬಾಲ್, ಲಾನ್‌ಟೆನ್ನಿಸ್ ಕ್ರೀಡೆಯಲ್ಲೂ ಆಸಕ್ತಿಯಿದೆ. ಹಲ ವಾರು ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಕಾಶ್ಮಿಯಾ, ಹಲವು ಪದಕಗಳನ್ನು ಹಾಗೂ ಟ್ರೋಫಿಗಳನ್ನು ಗೆದ್ದಿದ್ದಾಳೆ.
ಹತ್ತೂವರೆ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಪಾಲ್ಗೊಳ್ಳ ಬಹುದಾದ ಈ ಪರೀಕ್ಷೆಯಲ್ಲಿ ಕಾಶ್ಮಿಯಾ 162 ಅಂಕಗಳನ್ನು ಗಳಿಸುವ ಮೂಲಕ ಶೇ.100ರಷ್ಟು ಸಾಧನೆ ಮಾಡಿದ ಅತಿ ಕಿರಿಯ ಬಾಲಕಿಯೆಂದು ಮೆನ್ಸಾದ ವಕ್ತಾರರು ತಿಳಿಸಿದ್ದಾರೆ.