‘ನಾಟಕ ಜೀವನವನ್ನು ರೂಪಿಸುವ ಜೀವಂತ ಕಲೆ’

ಮಂಗಳೂರು, ಜ.10: ಪ್ರತಿ ಮುಂಜಾವಿನಿಂದ ರಾತ್ರಿಯ ತನಕ ನಾವು ನಮ್ಮ ಮುಖಭಾವದಲ್ಲಿ ಹಲವು ರೀತಿಯ ಭಾವನೆಗಳನ್ನು ತೋರ್ಪಡಿಸುತ್ತೇವೆ. ಆದುದರಿಂದ ನಮ್ಮ ದಿನನಿತ್ಯದ ಜೀವನವೂ ಒಂದು ನಾಟಕ. ನಾಟಕ ನಮ್ಮ ಜೀವನದ ಅವಿಭಾಜ್ಯ ಅಂಗ. ಇದು ಜೀವನವನ್ನು ರೂಪಿಸುವ ಕಲೆ ಎಂದು ಅಂಕಣಕಾರ ವಂ. ಪ್ರಶಾಂತ್ ಮಾಡ್ತಾ ನುಡಿದರು.
ರವಿವಾರ ಸಂಜೆ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆದ 5ನೆ ‘ಕರಾವಳಿ ಕೊಂಕಣ್ ಕಲಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಕೊಂಕಣಿ ರಂಗಭೂಮಿಯ ಹಿರಿಯ ಕಲಾವಿದೆ ಎವ್ಲಿನಾ ಮೇರಿ ಡಿಸಿಲ್ವಾರಿಗೆ 50 ಸಾವಿರ ರೂ. ನಗದು ಸಹಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಂದೂರ್ ಧರ್ಮಕೇಂದ್ರದ ಗುರುಗಳಾದ ವಂ. ಆ್ಯಂಟನಿ ಸೆರಾವೊ, ಕರಾವಳಿ ಕೊಂಕಣ್ಸ್ ಅಧ್ಯಕ್ಷ ಲೆಸ್ಲಿ ರೇಗೊ ಭಾಗವಹಿಸಿದ್ದರು.
ಕ್ಲೊಡ್ ಡಿಸೋಜ ಸ್ವಾಗತಿಸಿದರು. ಡೊಲ್ಫಿ ಸಲ್ದಾನಾ ಸನ್ಮಾನಿತೆಯ ಕೊಂಕಣಿ ರಂಗಕಲೆಯೊಂದಿಗಿನ ಒಡನಾಟದ ಪರಿಚಯ ಮಾಡಿದರು. ಡೊಲ್ಲಾ ಮಂಗಳೂರು ಸನ್ಮಾನ ಪತ್ರ ವಾಚಿಸಿದರು. ರಶ್ಮಿ ಪೆರಿಸ್ ಕಾರ್ಯಕ್ರಮ ನಿರೂಪಿಸಿದರು.