ರಸ್ತೆ ಸುರಕ್ಷತಾ ಅಭಿಯಾನದಿಂದಲೂ ಆಮಿರ್‌ಗೆ ಖೊಕ್

ಹೊಸದಿಲ್ಲಿ, ಜ.10: ಪ್ರವಾಸೋದ್ಯಮ ಇಲಾಖೆಯ ಇನ್‌ಕ್ರೆಡಿಬಲ್ ಇಂಡಿಯಾ ಅಭಿಯಾನದಿಂದ ತೆರವುಗೊಳಿಸಲ್ಪಟ್ಟ ಆಮಿರ್‌ಖಾನ್‌ರನ್ನು ಇದೀಗ ಕೇಂದ್ರ ಸರಕಾರದ ರಸ್ತೆ ಸುರಕ್ಷತಾ ಅಭಿಯಾನದಿಂದಲೂ ಕೈಬಿಡಲಾಗಿದೆಯೆಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಆಮಿರ್‌ಖಾನ್ ಅವರನ್ನು 2014ರಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಒತ್ತಾಸೆಯ ಮೇರೆಗೆ ಅಭಿಯಾನಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಅಮೀರ್‌ರ ಸತ್ಯಮೇವ ಜಯತೆ ಕಾರ್ಯಕ್ರಮದ ‘‘ ರಸ್ತೆ ಅವಘಡಗಳೋ ಅಥವಾ ಕೊಲೆಗಳೋ?’’ ಎಪಿಸೋಡ್‌ನಿಂದ ಪ್ರೇರಿತರಾಗಿ ಅವರನ್ನು ಗಡ್ಕರಿ, ಅಭಿಯಾನದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದ್ದರು.
ಆದರೆ ಅಭಿಯಾನದ ಟಿವಿ ಹಾಗೂ ಮುದ್ರಣ ಜಾಹೀರಾತುಗಳಲ್ಲಿ ಉಚಿತವಾಗಿಯೇ ಕಾಣಿಸಿಕೊಳ್ಳಲು ಖಾನ್ ಒಪ್ಪಿಕೊಂಡಿದ್ದರು. ಆದರೆ ಅವರ ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ, ಜಾಹೀರಾತಿನ ಚಿತ್ರೀಕರಣವನ್ನು ಹಲವು ಸಲ ಮುಂದೂಡಬೇಕಾಯಿತು.ಆನಂತರ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಆಮಿರ್ ಖಾನ್ ಹೇಳಿಕೆ ನೀಡಿದ ಬಳಿಕ ಈ ಯೋಜನೆಯು ತಟಸ್ಥಗೊಂಡಿತೆಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಅಭಿಯಾನದ ಭಾಗವಾಗಲು ಖಾನ್ ಒಪ್ಪಿಕೊಂಡಾಗ ಸಚಿವಾಲಯವು ತುಂಬಾ ಉತ್ಸಾಹವನ್ನು ತೋರಿತ್ತು. ಆದಾಗ್ಯೂ ಅವರ ಅಸಹಿಷ್ಣುತೆ ಕುರಿತ ಹೇಳಿಕೆಯಿಂದಾಗಿ, ಸಚಿವಾಲಯದ ಜೊತೆಗೆ ಅವರ ನಂಟು ಮುಂದುವರಿಯಲಾರದೆಂಬುದು ಸ್ಪಷ್ಟವಾಯಿತು. ಇದೀಗ ಅಭಿಯಾನದ ಪ್ರಚಾರ ರಾಯಭಾರಿಯಾಗಿ ಇನ್ನೋರ್ವ ಜನಪ್ರಿಯ ವ್ಯಕ್ತಿಯ ಹುಡುಕಲಾಗುತ್ತಿದೆಯೆಂದು,ಕಳೆದ ಡಿಸೆಂಬರ್‌ನಲ್ಲಿ ನಿವೃತ್ತರಾದ ಮಾಜಿ ರಸ್ತೆ ಸಾರಿಗೆ ಕಾರ್ಯದರ್ಶಿ ವಿಜಯ್ ಚಿಬ್ಬರ್ ತಿಳಿಸಿದ್ದಾರೆ.