ಜನರ ಹಿತಕ್ಕಾಗಿಯೇ ಜನಸಂಪರ್ಕ ಸಭೆ: ಸೊರಕೆ

ಕುಂದಾಪುರ, ಜ.10: ಮುಖ್ಯಮಂತ್ರಿಯವರ ಸೂಚನೆಯಂತೆ ಸರಕಾರದ ಯೋಜನೆಗಳು ಜನರಿಗೆ ತಲುಪುವುದನ್ನು ಖಾತರಿಪಡಿಸಲು ಜಿಲ್ಲೆಯಾದ್ಯಂತ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಜನರ ಬಳಿಗೆ ಸರಕಾರ ಎಂಬುದನ್ನು ಸಾಬೀತುಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಗುರುವಾರ ಆಯೋಜಿ ಸಲಾದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭ 211 ಸ್ತ್ರೀಶಕ್ತಿ ಗುಂಪುಗಳಿಗೆ ಸುತ್ತು ನಿಧಿ ವಿತರಿಸಲಾಯಿತು. ಆತ್ಮಹತ್ಯೆಗೈದ ರೈತರೊಬ್ಬರ ಪತ್ನಿ ಗುಲಾಬಿ ಶೆಟ್ಟಿ ಅವರಿಗೆ ಕೃಷಿ ಇಲಾಖೆಯಿಂದ 5 ಲಕ್ಷ ರೂ. ಚೆಕ್ ವಿತರಿಸಲಾಯಿತು. ಬೆಳೆ ಪರಿಹಾರಾರ್ಥ ಒಂದುಲಕ್ಷರೂ.ಗಳನ್ನು ಶ್ಯಾಮಲಾ ಶೆಟ್ಟಿಯವರಿಗೆ ವಿತರಿಸಲಾಯಿತು. ಸಭೆಯಲ್ಲಿ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಅಧ್ಯಕ್ಷೆ ಕಲಾವತಿ ಎಸ್., ಮೀನುಗಾರಿಕಾ ನಿಗಮದ ಅಧ್ಯಕ್ಷ ಹಿರಿಯಣ್ಣ ಛಾತ್ರಬೆಟ್ಟು, ಪ್ರಾಧಿಕಾರದ ಅಧ್ಯಕ್ಷ ಜೇಕಬ್ ಡಿಸೋಜ, ಜಿಪಂ ಸದಸ್ಯ ಗಣಪತಿ ಶ್ರೀಯಾನ್, ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್., ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಸಹಾಯಕ ಆಯುಕ್ತೆ ಎಸ್. ಅಶ್ವಥಿ ಉಪಸ್ಥಿತರಿದ್ದರು.





