ಸರಕಾರಕ್ಕೆ ಮಕ್ಕಳ ಬಗ್ಗೆ ಕಾಳಜಿ ಇಲ್ಲ: ಬರಗೂರು ಕಳವಳ

ಬೆಂಗಳೂರು, ಜ. 10: ವಿಶ್ವಬ್ಯಾಂಕ್ ವರದಿಯನ್ವಯ ವಿಶ್ವದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಲ್ಲಿ ಶೇ.42ರಷ್ಟು ಮಂದಿ ಭಾರತೀಯರಿದ್ದು, ದೇಶದಲ್ಲಿ ಪ್ರತಿ ವರ್ಷ ಆಹಾರದ ಸಮಸ್ಯೆಯಿಂದ 25ಲಕ್ಷ ಮಕ್ಕಳು ಸಾಯುತ್ತಿದ್ದಾರೆೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಕಳೆದ ಸಾಲಿನ ಬಿಸಿಯೂಟದ ಅನುದಾನದಲ್ಲಿ 3,225 ಕೋಟಿ ರೂ.ಗಳನ್ನು ಸರಕಾರ ಕಡಿತಗೊಳಿಸಿದೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರ್ತಕರ್ತ ಚ.ಹ.ರಘುನಾಥ್ ರಚಿಸಿರುವ ‘ಪುಟ್ಟಲಕ್ಷ್ಮಿ ಕಥೆಗಳು’ ಮತ್ತು ಲೇಖಕ ಜಯಪ್ರಕಾಶ ಮಾವಿನಕುಳಿ ಅವರ ಕಥಾ ಸಂಕಲನ ‘ಬ್ರಹ್ಮರಾಕ್ಷಸ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಭಾರತದ ಮಕ್ಕಳಲ್ಲಿನ ಅಪೌಷ್ಟಿಕತೆಯ ಕುರಿತು ವಿಶ್ವಬ್ಯಾಂಕ್ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್ 2001ರಲ್ಲಿ ಗಂಭೀರವಾಗಿ ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಶಾಲಾ ಮಕ್ಕಳಿಗೆ ಪ್ರತಿನಿತ್ಯ 300ಗ್ರಾಂ ಪೌಷ್ಟಿಕ ಆಹಾರ ನೀಡುವಂತೆ ಆದೇಶ ನೀಡಿದೆ ಎಂದರು.
ನ್ಯಾಯಾಲಯದ ಆದೇಶದಂತೆ ಸರಕಾರ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ 2014-15ನೆ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ಯೋಜನೆಯ ಅನುದಾನದ ಪ್ರಮಾಣವನ್ನು ಕಡಿತಗೊಳಿಸಿರುವುದು ಮಕ್ಕಳ ಭೌತಿಕ, ಮಾನಸಿಕ ಬೆಳವಣಿಯ ಮೇಲೆ ನೇರ ಪರಿಣಾಮ ಬೀರಿದೆ ಎಂದು ಆತಂಕಪಟ್ಟರು.
ಮಕ್ಕಳ ಬಗ್ಗೆ ಸರಕಾರಕ್ಕೆ ಕಾಳಜಿಯಿಲ್ಲ. ದೇಶದಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಮತ್ತು ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದ್ದರೂ ಅವರ ನಿರ್ವಹಣೆಯಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ದೂರಿದ ಅವರು, ಕಾರ್ಪೊರೇಟ್ ವಲಯಕ್ಕೆ ಸರಕಾರಗಳು ಹೆಚ್ಚೆಚ್ಚು ಅನುದಾನ ನೀಡುವ ಬದಲು ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ದೇಹ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ ಯೋಜನೆಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
ಒಂದೇ ವೇದಿಕೆಯಲ್ಲಿ ಸಣ್ಣವರ-ದೊಡ್ಡವರ ಕಥೆಗಳ ಪುಸ್ತಕಗಳು ಬಿಡುಗಡೆಗೆ ಗೊಳಿಸಿದ್ದು ಸಂತಸ ತಂದಿದೆ ಎಂದ ಅವರು, ಲೇಖಕ ಚ.ಹ.ರಘುನಾಥ್ ರಚಿಸಿರುವ ಪುಟ್ಟಲಕ್ಷ್ಮಿ ಕಥೆಗಳು ಮಕ್ಕಳಿಗೆ ದೇಹ ಮತ್ತು ಮನಸ್ಸಿಗೆ ಹೆಚ್ಚು ಉಪಯುಕ್ತವಾಗಿದೆ. ಕಥೆಯಲ್ಲಿ ಬರುವ ಪುಟ್ಟಲಕ್ಷ್ಮಿಪಾತ್ರ ಮಕ್ಕಳಿಗೂ ಮತ್ತು ವಯಸ್ಕರಿಗೂ ಆತ್ಮಸ್ಥೈರ್ಯದ ಜೊತೆ ಧೈರ್ಯವನ್ನು ತುಂಬುತ್ತದೆ ಎಂದು ತಿಳಿಸಿದರು.
ಲೇಖಕರು ವಯೋಮಾನ-ಮನೋಮಾನ ವನ್ನು ಏಕಕಾಲದಲ್ಲಿ ಸ್ಥಾನಪಲ್ಲಟ ಮಾಡಿ ತಮ್ಮ ಮನಸ್ಸನ್ನು ಬಾಲ್ಯದ ಜೀವನಕ್ಕೆ ಕೊಂಡೊಯ್ಯುವುದು ಅಲ್ಲಿನ ಸವಿ ನೆನಪುಗಳನ್ನು 14ಕಥೆಗಳಾಗಿ ಹೊರ ತಂದಿದ್ದಾರೆ. ಈ ಮಕ್ಕಳ ಕಥೆಗಳು ಜನಪದಿಯತೆ ಮತ್ತು ಆಧುನಿಕತೆಯ ಬೆಸುಗೆಯಿಂದ ಕೂಡಿದೆ. ಈ ಮೂಲಕ ನವ ಜನಪದ ಸಾಹಿತ್ಯಕ್ಕೆ ಪುಷ್ಠಿ ನೀಡಿದ್ದಾರೆಂದು ಬಣ್ಣಿಸಿದರು.
ಲೇಖಕ ಜಯಪ್ರಕಾಶ ಮಾವಿನಕುಳಿ ಅವರ ಕಥಾ ಸಂಕಲನ ‘ಬ್ರಹ್ಮರಾಕ್ಷಸ’ ಕೃತಿಯಲ್ಲಿ ಪುರುಷನ ಧರ್ಪ, ಮಹಿಳೆಯರ ಸ್ಥಾನಮಾನ ಮತ್ತು ಮಾನವನ ಸಂಬಂಧಗಳ ಕುರಿತು ಚಿತ್ರಿಸಿದ್ದಾರೆ. ಈ ಕೃತಿಯಲ್ಲಿನ 15 ಕಥೆಗಳು ಓದುಗರಲ್ಲಿ ಹೃದಯವಂತಿಕೆಯನ್ನು ತಿಳಿಸಿ, ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದು ಒತ್ತಿ ಹೇಳಿದರು.
ವಿಮರ್ಶಕ ಎಸ್.ದಿವಾಕರ್, ಕವಿ ಮುಕುಂದ ರಾಜ್, ಕೃತಿಗಳ ಲೇಖಕರಾದ ಚ.ಹ. ರಘುನಾಥ್, ಜಯಪ್ರಕಾಶ ಮಾವಿನಕುಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.





