ಟ್ಯೂಟರ್ ಆಗಿ ಬದಲಾದ ಐಎಎಸ್ ಅಧಿಕಾರಿ !

ಜಬಲ್‌ಪುರ, ಜ.11: ರೋಮನ್ ಸೈನಿ ಓರ್ವ ಐಎಎಸ್ ಅಧಿಕಾರಿ. ಆದರೆ ಕೈ ತುಂಬಾ ಸಂಬಳ ಬರುವ ಆ ಹುದ್ದೆಯನ್ನು ತೊರೆದು ಐಎಎಸ್ , ಐಪಿಎಸ್ ಮತ್ತಿತರ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಮಾರ್ಗದರ್ಶಕರಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
24ರ ಹರೆಯದ ರೋಮನ್ ಐಎಎಸ್ ಪರೀಕ್ಷೆಯಲ್ಲಿ ಪಾಸಾದ ಬಳಿಕ ಜಬಲ್‌ಪುರದ ಅಸಿಸ್ಟೆಂಟ್ ಕಲೆಕ್ಟರ್ ನೇಮಕಗೊಂಡಿದ್ದರು. ಆದರೆ ಸ್ವಲ್ಪ ಸಮಯ ಸೇವೆ ಸಲ್ಲಿಸಿದರು. ಅಷ್ಟು ಹೊತ್ತಿಗೆ ಅವರಿಗೆ ಸಿವಿಲ್ ಸರ್ವಿಸ್ ಆಕಾಂಕ್ಷಿಗಳಿಗೆ ಆನ್‌ಲೈನ್‌ನಲ್ಲಿ ಕೋಚಿಂಗ್ ಆಗಿ ಸೇವೆ ಸಲ್ಲಿಸುವ ಯೋಚನೆ ಬಂತು. ತನ್ನ ಹುದ್ದೆಗೆ ರಾಜೀನಾಮೆ ನೀಡಿದ ರೋಮನ್ ಪೂರ್ಣಾವಧಿ ಇ- ಟ್ಯೂಟರ್ ಆಗಿ ತನ್ನನ್ನು ತೊಡಗಿಸಿಕೊಂಡರು. ರೋಮನ್ ಮತ್ತು ಅವರು ಸ್ನೇಹಿತ ಗೌರವ್ ಮಂಜಲ್ ಜೊತೆಯಾಗಿ ಪ್ರಾರಂಭಿಸಿದ ಇ-ಟ್ಯೂಟೊರಿಯಲ್ .’ ಅನ್‌ಅಕಾಡಮಿ .ಇನ್ ’ ಸಿವಿಲ್ ಸರ್ವಿಸ್ ಸ್ಪರ್ಧಾ ಆಕಾಂಕ್ಷಿಗಳಿಗೆ ಆಶಾಕಿರಣವಾಗಿದೆ. ನೂರಾರು ಮಂದಿ ಆನ್ ಲೈನ್ ಮೂಲಕ ಇವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ರೋಮನ್ ಮೂಲತ: ಓರ್ವ ವೈದ್ಯ. ದಿಲ್ಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಪಾಸ್ ಮಾಡಿದ್ದರು. ಬಳಿಕ ಐಎಎಸ್ ತೆಗೆದುಕೊಂಡು ಅದರಲ್ಲೂ ಯಶಸ್ಸು ಗಳಿಸಿದ್ದರು. ಆದರೆ ಅವರು ಐಎಎಸ್ ಅಧಿಕಾರಿಯಾಗಿ ಮುಂದುವರಿಯಲು ಬಯಸಲಿಲ್ಲ. ತನ್ನ ಮೂಲಕ ಇನ್ನಷ್ಟು ಐಎಎಸ್ ಅಧಿಕಾರಿಗಳನ್ನು ರೂಪಿಸುವ ಕನಸು ಕಂಡಿದ್ಧಾರೆ.. ಅವರ ಈ ಯೋಚನೆ ಹಾಗೂ ಯೋಜನೆ ಫಲ ನೀಡಿದೆ.





