ಯುವಜನರನ್ನು ಪ್ರೋತ್ಸಾಹಿಸಿದರು; ಪ್ರಯೋಗವನ್ನು ಗೆಲ್ಲಿಸಿದರು -ಶ್ರೀಕಂಠಮೂರ್ತಿ
ಎಂಎ ಓದಿ, ಸಮಾಜವಾದಿ ಯುವಜನ ಸಭಾದ ಸಕ್ರಿಯ ಸದಸ್ಯನಾಗಿ, ಸಾಹಿತಿ-ಕಲಾವಿದರೊಂದಿಗೆ ಒಡನಾಟವಿಟ್ಟು ಕೊಂಡು, ಮೈಸೂರಿನಂತಹ ಸಾಂಸ್ಕೃತಿಕ ನಗರದ ಪರಿಸರದಿಂದ ಬಂದ ಶ್ರೀಕಂಠಮೂರ್ತಿ(65) ದೇವರಾಜ ಅರಸು ಅವರ ಕಣ್ಣಿಗೆ ಬಿದ್ದರು. ಅಣ್ಣ ಗೋಪಾಲಶಾಸ್ತ್ರಿ, ಅರಸು ಅವರ ನಿಷ್ಠಾವಂತ ಆಪ್ತ ಕಾರ್ಯದರ್ಶಿಯಾಗಿದ್ದ ಕಾರಣ ಕರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಹೇಳಿದ್ದರು. ಅರಸರ ಆಜ್ಞೆಯಂತೆ ಯೂತ್ ಕಾಂಗ್ರೆಸ್ ಸೇರಿದ ಶ್ರೀಕಂಠಮೂರ್ತಿ, ಹಳ್ಳಿಗಳತ್ತ ಹೆಜ್ಜೆ ಹಾಕಿ ಹಲವಾರು ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರು. ಪಕ್ಷ ರಾಜಕಾರಣದಲ್ಲಿ ಪಳಗಿ, ನಾಯಕನಾಗಿ ಹೊರಹೊಮ್ಮಿ ಶಾಸಕ, ಸಂಸದ, ಮಂತ್ರಿಯಾಗುವ ಬದಲಿಗೆ ಮುಖ್ಯಮಂತ್ರಿ(ಅರಸು, ಹೆಗಡೆ, ಪಟೇಲ್)ಗಳ ಆಪ್ತ ಬಳಗದಲ್ಲಿ ‘ಥಿಂಕ್ ಟ್ಯಾಂಕ್’ ನಂತೆ ಗುರುತಿಸಿಕೊಳ್ಳುವತ್ತಲೇ ಹೆಚ್ಚು ಗಮನ ಹರಿಸಿದರು. ಅರಸು ಅವರ ಆಪ್ತ ಬಳಗದಲ್ಲಿ ಒಬ್ಬರಾಗಿ, ಅವರೊಂದಿಗೆ ಕೂತು ಚರ್ಚಿಸುವ, ಪಟ್ಟಾಂಗದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ಯಾಗಿ ರೂಪು ಗೊಂಡರು. ಅಷ್ಟೇ ಅಲ್ಲ, ಅರಸು ಅವರ ವೈಯಕ್ತಿಕ, ಕೌಟುಂಬಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಹತ್ತಿರವಾಗಿದ್ದರು. ಅರಸು ಮತ್ತು ಜೆ.ಎಚ್.ಪಟೇಲರ ನಡುವಿನ ಕೊಂಡಿಯಂತೆಯೂ ಕೆಲಸ ಮಾಡಿದ್ದರು. ಅರಸರು ಕಾಂಗ್ರೆಸ್ ತೊರೆದು, ಸ್ವಂತ ಪಕ್ಷ ಕಟ್ಟಿದಾಗ ಆಲ್ ಇಂಡಿಯಾ ಅರಸು ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದರು. ಹಾಗೆ ನೋಡಿದರೆ, ಶ್ರೀಕಂಠಮೂರ್ತಿ ಒಳ್ಳೆಯ ಮಾತು ಗಾರರು, ಬುದ್ಧಿವಂತರು. ಆದರೆ ಅದೇಕೋ ಆ ಅನುಭವ ಮತ್ತು ಅರ್ಹತೆಗನುಗುಣವಾಗಿ ರಾಜಕಾರಣದಲ್ಲಿ ಸ್ಥಾನಮಾನಗಳೇನೂ ಸಿಗಲಿಲ್ಲ. ಅವರೂ ಅವುಗಳಿಗಾಗಿ ಪ್ರಯತ್ನಪಡಲಿಲ್ಲ. ಅರಸು ನಂತರ ಜನತಾ ಪಕ್ಷ ಸೇರಿ, ರಾಮಕೃಷ್ಣ ಹೆಗಡೆಯವರ ಆಪ್ತರಾಗಿ, ಬಾಲಭವನದ ಅಧ್ಯಕ್ಷರಾಗಿ, ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು. ಸಿಕ್ಕ ಅವಕಾಶದಲ್ಲಿ ಗಮನಾರ್ಹ ಕೆಲಸಗಳನ್ನೇನೂ ಮಾಡದಿದ್ದರೂ ಹೆಸರು ಕೆಡಿಸಿಕೊಳ್ಳದವರು, ಹೆಗಡೆಯವರ ನಿಧನಾನಂತರ ಲೋಕಶಕ್ತಿ ಪಕ್ಷ ಸೇರಿದರು. ಆನಂತರ ಜನತಾದಳ ಸೇರಿ, ನಗರ ಜಿಲ್ಲಾ ಅಧ್ಯಕ್ಷರಾದರು. ಗಾಂಧಿನಗರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು. ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರಿ ಮೀಡಿಯಾ ಇನ್‌ಚಾರ್ಜ್ ಆಗಿ ಕಾರ್ ು ನಿರ್ವಹಿಸುತ್ತಿದ್ದಾರೆ. ಶ್ರೀಕಂಠಮೂರ್ತಿಯವರು 1973 ರಿಂದ 1982ರವರೆಗೆ, ದೇವರಾಜ ಅರಸು ಅವರ ಸಂಪರ್ಕದಲ್ಲಿದ್ದವರು. ಅರಸರನ್ನು ಹತ್ತಿರದಿಂದ ಕಂಡದ್ದನ್ನು ಇಲ್ಲಿ ನೆನಪು ಮಾಡಿಕೊಂಡಿದ್ದಾರೆ. ಸಂದರ್ಶನ: ಬಸು ಮೇಗಲ್ಕೇರಿ
ವಾರ್ತಾಭಾರತಿ: ಅರಸು ಅವರನ್ನು ಮೊತ್ತ ಮೊದಲ ಬಾರಿಗೆ ನೋಡಿದ್ದು ಯಾವಾಗ?
ಶ್ರೀಕಂಠಮೂರ್ತಿ: 1973-74ರಲ್ಲಿ. ನಾನಾಗ ಮೈಸೂರಿನಲ್ಲಿ ಫೈನಲ್ ಇಯರ್ ಎಂಎ ಮಾಡ್ತಿದ್ದೆ. ನಮ್ಮ ವಯಸ್ಸಿಗೆ ಸಹಜವಾಗಿ ಸಮಾಜವಾದಿ ಯುವಜನಸಭಾ ಸೇರಿದ್ದೆ. ಆ ಯುವಜನ ಸಭಾ ಕಾರ್ಯಕ್ರಮಗಳಾದ ಸಭೆ, ಪ್ರತಿಭಟನೆ, ರ್ಯಾಲಿ, ಜಾಥಾದಲ್ಲಿ ಭಾಗವಹಿಸುವುದು, ಪ್ರೊ. ನಂಜುಂಡಸ್ವಾಮಿಗಳ ಭಾಷಣ ಕೇಳುವುದು ನನ್ನ ದಿನನಿತ್ಯದ ಕೆಲಸವಾಗಿತ್ತು. ಯಾವ ಪ್ರತಿಭಟನೆಯನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನನ್ನನ್ನು ಅಲ್ಲಿ ನೋಡಿದ್ದ ನನ್ನ ಪರಿಚಯದವರು, ದೇವರಾಜ ಅರಸು ಅವರಿಗೆ ‘ದೂರು’ ಕೊಟ್ಟಿದ್ದರು. ನಾನೇನು ದೊಡ್ಡ ವ್ಯಕ್ತಿಯಲ್ಲ, ಅಥವಾ ಅರಸು ಅವರಿಗೆ ರಾಜಕೀಯ ಕಾರಣಕ್ಕಾಗಿ ಬೇಕಾಗಿದ್ದವನೂ ಅಲ್ಲ. ನಮ್ಮಣ್ಣ ಗೋಪಾಲಶಾಸ್ತ್ರಿ ಅರಸು ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಅರಸು ಅವರಿಗೆ ತೀರಾ ಆತ್ಮೀಯರಾಗಿದ್ದರು. ಹೀಗಾಗಿ ನನ್ನ ಬಗ್ಗೆ ‘ದೂರು’ ಕೊಟ್ಟವರು, ಗೋಪಾಲಶಾಸ್ತ್ರಿ ತಮ್ಮ ಬೀದಿ ಸುತ್ತುತ್ತಿದ್ದಾನೆ ಎಂದಿದ್ದರು. ಒಂದು ದಿನ ನಾನು ನಮ್ಮಣ್ಣನನ್ನು ಡ್ರಾಪ್ ಮಾಡಲು ಹೋಗಿದ್ದಾಗ, ಅರಸು ನನ್ನನ್ನು ಕರೆದು, ‘‘ಅಲ್ಲಪ್ಪಾ, ನಿಮ್ಮಂತಹ ಯುವಕರು ನಮ್ಮ ಪಾರ್ಟಿ ಸೇರಿ, ರಾಜಕೀಯ ಸ್ಥಾನ ಮಾನಗಳನ್ನು ಪಡೀಬೇಕು, ಸಮಾಜಕ್ಕೆ-ರಾಜ್ಯಕ್ಕೆ ನಿಮ್ಮಿಂದ ಕೆಲಸ ಕಾರ್ಯಗಳಾಗಬೇಕು, ಯೂತ್ ಕಾಂಗ್ರೆಸ್ ಸೇರಿಕೋ’’ ಅಂದರು. ಯೂತ್ ಕಾಂಗ್ರೆಸ್ ಕಾರ್ಯಕರ್ತನಾದೆ. ಅಲ್ಲಿಂದ ಅವರ ಜೊತೆಗಿನ ಒಡನಾಟ ಶುರುವಾಯಿತು.
ವಾ.ಭಾ: ಅರಸರಿಗೆ ಯುವಕರನ್ನು ಕಂಡರೆ ಯಾಕಷ್ಟು ಪ್ರೀತಿ?
ಮೂರ್ತಿ: ಬರೀ ಪ್ರೀತಿಯಲ್ಲ, ಈ ದೇಶ ಉದ್ಧಾರ ಆಗಬೇಕಾದ್ರೆ, ಅದು ಯುವಜನತೆಯಿಂದಲೇ ಎಂಬುದು ಅರಸು ಅವರ ಬಲವಾದ ನಂಬಿಕೆಯಾಗಿತ್ತು. ಆ ಕಾರಣಕ್ಕಾಗಿಯೇ ಯುವಜನರನ್ನು ಅತಿಯಾಗಿಯೇ ಪ್ರೋತ್ಸಾಹಿಸುತ್ತಿದ್ದರು. ಅದು ಬರೀ ಮಾತಲ್ಲ, ತೋರಿಕೆಯಲ್ಲ, ಪ್ರಚಾರಕ್ಕಾಗಿಯಂತೂ ಅಲ್ಲವೇ ಅಲ್ಲ. ಅವರಲ್ಲೊಂದು ವಿಶೇಷವಾದ ಗುಣವಿತ್ತು; ಯಾರಾದರೂ ಬಂದರೆ, ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿ, ತಮ್ಮಿಂದ ಆಗುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಕೊಡುತ್ತಿದ್ದರು. ಈ ಪ್ರೀತಿ ವಿಶ್ವಾಸವನ್ನು ಕಂಡುಂಡ ಯುವಕರು ಅರಸು ಅವರನ್ನು ಮೆಚ್ಚದೆ ಇರಲು ಸಾಧ್ಯವೇ ಇರುತ್ತಿರಲಿಲ್ಲ. ಜೊತೆಗೆ ಅರಸು, ಜಾತಿಯ ಬೆಂಬಲವಿಲ್ಲದ, ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯಿಲ್ಲದ, ಹಣಕಾಸಿನ ಬಲವಿಲ್ಲದ, ರಾಜಕೀಯದ ಗಂಧಗಾಳಿಯೂ ಗೊತ್ತಿಲ್ಲದ ಯುವಕರನ್ನು ಗುರುತಿಸಿ, ಅವರನ್ನು ಯೂತ್ ಕಾಂಗ್ರೆಸ್ ಸದಸ್ಯರನ್ನಾಗಿಸುತ್ತಿದ್ದರು. ಆತ ಒಂದು ರಾಷ್ಟ್ರೀಯ ಪಕ್ಷದ ಸದಸ್ಯನಾಗುತ್ತಿದ್ದಂತೆ, ಅಲ್ಲಿ ಅವರಿಗೆ ಅಧಿಕಾರದ ಸ್ಥಾನಗಳನ್ನು ನೀಡಿ, ಸಮಾಜಮುಖಿ ಕೆಲಸಗಳಿಗೆ ಒಡ್ಡುತ್ತಿದ್ದರು. ಅವರಲ್ಲಿ ತಾನೇ ತಾನಾಗಿ ನಾಯಕತ್ವದ ಗುಣಗಳು ಬೆಳೆಯುವಂತೆ ಮಾಡುತ್ತಿದ್ದರು. ಉದಾಹರಣೆಗೆ, ರಘುಪತಿ, ಡಿ.ಬಿ.ಚಂದ್ರೇಗೌಡ, ಮೊಹಿದಿನ್, ಸುಬ್ಬಯ್ಯ ಶೆಟ್ಟಿ, ಮನೋರಮಾ, ವೀರಪ್ಪ ಮೊಯ್ಲಿ, ಜಾಫರ್ ಶರೀಫ್, ರಮೇಶ್‌ಕುಮಾರ್, ಎಂ.ಸಿ. ನಾಣಯ್ಯ, ಮಾರ್ಗರೆಟ್ ಆಳ್ವ, ಕೆ. ಲಕ್ಕಣ್ಣ, ಕೋಳಿವಾಡ, ದೇವೇಂದ್ರಪ್ಪ ಘಾಳಪ್ಪ, ಬಿ. ಶಿವಣ್ಣ, ಜಯಚಂದ್ರ, ವಿಶ್ವನಾಥ್... ಒಬ್ಬರೆ ಇಬ್ಬರೆ? 1971 ಮತ್ತು 1978ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಅರಸು ಬರೀ ಯುವಕರನ್ನೇ ಆಯ್ದು ಟಿಕೆಟ್ ಕೊಟ್ಟಿದ್ದರು, ಅವರೆಲ್ಲ ಗೆದ್ದು ಅರಸು ಅವರ ಪ್ರಯೋಗವನ್ನು ಮತ್ತು ನಂಬಿಕೆಯನ್ನು ಗೆಲ್ಲಿಸಿದ್ದರು. ಇವತ್ತು ಅವರೆಲ್ಲ ಏನೇನಾಗಿದ್ದಾರೆಂಬುದನ್ನು ನೀವೇ ನೋಡ್ತಿದ್ದೀರಲ್ಲ. ನನ್ನದೇ ಅನುಭವ ಹೇಳುವುದಾದರೆ, ನಾನು ಬ್ರಾಹ್ಮಣರ ಪೈಕಿಯವನು, ನನ್ನ ಹಿಂದೆ ಯಾವ ಓಟ್ ಬ್ಯಾಂಕ್ ಕೂಡ ಇಲ್ಲ. ಆದರೆ ಅರಸು ನಮ್ಮಂತಹ ಯುವಕರನ್ನು ಮನೆಗೆ ಕರೆದು, ಇಂಥದ್ದು ಮಾಡಬೇಕು, ಹಳ್ಳಿಗಳತ್ತ ಹೋಗಬೇಕು, 20 ಅಂಶದ ಕಾರ್ಯಕ್ರಮಗಳು ಜನರಿಗೆ ತಲುಪುತ್ತಿವೆಯೇ ಎಂಬುದನ್ನು ನೋಡಬೇಕು, ಇಲ್ಲದಿದ್ದರೆ ಮಂತ್ರಿಗಳ-ಅಧಿಕಾರಿಗಳ ಗಮನಕ್ಕೆ ತಂದು ಮಾಡಿಸಬೇಕು ಎಂದು ವಿವರಿಸುತ್ತಿದ್ದರು. ಇದರಿಂದಾದ ಪರಿಣಾಮ ಸಾಮಾನ್ಯದ್ದಲ್ಲ. ಅರಸು ಹೇಳುತ್ತಿದ್ದರೆ, ನಾನು ಬರೆದುಕೊಂಡು ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗಾಗಿಯೇ ಪ್ರಶ್ನೋತ್ತರದ ಪಟ್ಟಿಯನ್ನೇ ತಯಾರಿಸುತ್ತಿದ್ದೆ. ಈಗ ನಾಯಕತ್ವದ ಕೊರತೆಯೂ ಇದೆ, ವೌಲ್ಯಗಳೂ ಬದಲಾಗಿವೆ.
ವಾ.ಭಾ: ಅರಸರಲ್ಲಿ ನೀವು ಕಂಡ ವಿಶೇಷ ಗುಣ?
ಮೂರ್ತಿ: ಕಷ್ಟಕ್ಕೆ ಕರಗುವ ಮಾನವೀಯ ಗುಣ, ಜನಪರ ಕಾಳಜಿ, ಸಮಾಜಮುಖಿ. ಯಾರಾದರೂ ಬಂದು ಕಷ್ಟ ಹೇಳಿಕೊಂಡರೆ, ಅರಸು ಅವರ ಕಣ್ಣಲ್ಲಿ ನೀರಾಡುತ್ತಿತ್ತು. ನಾನು ಇಲ್ಲಿಯವರೆಗೆ ಯಾವ ಮುಖ್ಯಮಂತ್ರಿಯಲ್ಲಿಯೂ ಇದನ್ನು ಕಂಡಿಲ್ಲ.
ವಾ.ಭಾ: ಅರಸರ ಭೂ ಸುಧಾರಣೆ ಕಾಯ್ದೆ ಬ್ರಾಹ್ಮಣರಿಗೆ ವಿರುದ್ಧವಾಗಿತ್ತು ಎಂಬ ಸುದ್ದಿ ಇದೆಯಲ್ಲ?
ಮೂರ್ತಿ: ಭೂ ಸುಧಾರಣೆ ಕಾಯ್ದೆಯಿಂದ ಬ್ರಾಹ್ಮಣರಿಗೆ ಭಾರೀ ತೊಂದರೆಯಾಯಿತು. ಭೂ ಮಾಲಕರಾಗಿದ್ದ, ಶ್ರೀಮಂತರಾಗಿದ್ದ, ಸುಖವಾಗಿದ್ದ ಬ್ರಾಹ್ಮಣರು ಇದ್ದಕ್ಕಿದ್ದಂತೆ, ಒಂದೇ ದಿನದಲ್ಲಿ ಎಲ್ಲ ವನ್ನು ಕಳೆದುಕೊಂಡು ನಿರ್ಗತಿಕರಾದರು. ಕಷ್ಟ ನಷ್ಟಕ್ಕೊಳಗಾದರು. ಆದರೆ ನನಗೆ ಗೊತ್ತಿರುವ ಹಾಗೆ, ಅವರಾರೂ ಅರಸು ಅವರ ಕ್ರಾಂತಿಕಾರಕ ಭೂ ಸುಧಾರಣಾ ಕಾಯ್ದೆಯನ್ನು ವಿರೋಧಿಸಲಿಲ್ಲ. ಜೀವನಪರ್ಯಂತ ಬೆವರು ಹರಿಸಿ ತಮ್ಮನ್ನು ತಣ್ಣಗಿಟ್ಟಿದ್ದ ಗೇಣಿದಾರರೊಂದಿಗೆ ಗುದ್ದಾಟಕ್ಕೂ ಇಳಿಯಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಬಡ ಗೇಣಿದಾರ ಭೂ ಮಾಲಕನಾದಾಗ, ಅವನಲ್ಲಿ ಆಗುವ ಬದಲಾವಣೆಯನ್ನು, ಸಾಮಾಜಿಕ ಸುಧಾರಣೆಯನ್ನು, ಆರ್ಥಿಕ ಸದೃಢತೆಯನ್ನು ಅರಸು ಭೂ ಮಾಲಕರಿಗೆ ಮನದಟ್ಟು ಮಾಡಿಸಿದರು. ಕೆಲವು ಕಡೆ ಭೂ ಮಾಲಕ ಬ್ರಾಹ್ಮಣರು ತಗಾದೆ ತೆಗೆದ ಉದಾಹರಣೆಗಳೂ ಇವೆ, ಆದರೆ ಅವು ಬಹಳ ಕಡಿಮೆ. ಹಾಗೆಯೇ ಮೀಸಲಾತಿ ಬಗ್ಗೆಯೂ ಬ್ರಾಹ್ಮಣರ ಬೆಂಬಲ ಅರಸು ಅವರಿಗಿತ್ತು.
ವಾ.ಭಾ: ಅರಸರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಳ್ಳುವುದಾದರೆ...
ಮೂರ್ತಿ: ನಮ್ಮಣ್ಣ ಗೋಪಾಲಶಾಸ್ತ್ರಿ (ಈಗ ಆರೋಗ್ಯ ಕೈ ಕೊಟ್ಟು ಹಾಸಿಗೆ ಹಿಡಿದಿದ್ದಾರೆ)ಯನ್ನು ಪ್ರತಿದಿನ ಅರಸು ಅವರ ಮನೆಗೆ ಡ್ರಾಪ್ ಮಾಡುವುದು ನನ್ನ ಕೆಲಸವಾಗಿತ್ತು. ಆಗ ಅರಸರೊಂದಿಗೆ ಸ್ವಲ್ಪ ಸಂವಾದ. ಯಾವಾಗಲಾದರೂ ಒಂದೊಂದು ಸಲ ಅರಸರೊಂದಿಗೆ ಬೆಳಗಿನ ಜಾವ ವಾಕ್ ಮಾಡಿದ್ದೂ ಉಂಟು. ನನಗಿಂತಲೂ ಅವರ ಜೊತೆ ವಾಕ್‌ಗೆ ಕಂಪಲ್ಸರಿ ಇರುತ್ತಿದ್ದವರು ಬಿ.ಟಿ. ಸೋಮಣ್ಣ, ರಮೇಶ್‌ಕುಮಾರ್, ರಘುಪತಿ. ನಾನು ಗಮನಿಸಿದಂತೆ ಅರಸು ವಾಕ್ ಮಾಡುವಾಗ ಮಾತನಾಡುತ್ತಿರಲಿಲ್ಲ. ಮನನ ಮಾತ್ರ.
ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಡಾ. ಎಚ್.ಎಲ್. ತಿಮ್ಮೇಗೌಡರು, ತಮ್ಮ ಪ್ರತಿಸ್ಪರ್ಧಿಯಾಗಿದ್ದ ದೇವರಾಜ ಅರಸು ಅವರ ವಿರುದ್ಧ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆಯೋಗಕ್ಕೆ ದೂರು ಸಲ್ಲಿಸಿ, ಕೋರ್ಟ್ ಮೆಟ್ಟಿಲು ಹತ್ತಿದ್ದರು. ರಾಜ್ಯ ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. ಕೋರ್ಟ್‌ಗೆ ಹೋಗುವಾಗ ನಾನು ಅವರ ಜೊತೆಗಿರುತ್ತಿದ್ದೆ. ಕಾರಿನಲ್ಲಿ ಹೋಗುವಾಗ ಅರಸು ಅವರು, ‘‘ಡಾಕ್ಟ್ರು ತುಂಬಾ ಒಳ್ಳೆಯ ವ್ಯಕ್ತಿಗಳು. ಜಾತಿಗೆ ಕಟ್ಟುಬಿದ್ದು, ಹೇಳಿಕೆ ಮಾತು ಕೇಳಿ ಜನತಾ ಪಕ್ಷದಿಂದ ಚುನಾವಣೆಗಿಳಿದರು. ಸೋತಾಗ ಸುಮ್ಮನಿರಲು ಬಿಡದ ಜಾತಿಬಾಂಧವರು ಅವರ ಕಿವಿಚುಚ್ಚಿ ದೂರು ಸಲ್ಲಿಸುವಂತೆ ನೋಡಿಕೊಂಡಿದ್ದಾರೆ. ಹಾಗೆ ನೋಡಿದರೆ, ನನ್ನ ಎರಡು ಹೆಣ್ಣುಮಕ್ಕಳಿಗೆ ಹೆರಿಗೆ ಮಾಡಿಸಿದ್ದು ಅವರೆ. ನಮ್ಮ ಮನೆ ಡಾಕ್ಟ್ರು. ಈಗ ಅವರನ್ನು ಕೋರ್ಟ್‌ನ ಕಟಕಟೆಯಲ್ಲಿ ನಿಂತು ನೋಡಬೇಕಾಗಿದೆ’’ ಎಂದು ತುಂಬಾ ನೊಂದುಕೊಂಡಿದ್ದರು. ಆ ಕೇಸ್‌ನಲ್ಲಿ ಅರಸು ಪರ ವಕೀಲರು ಭೈರಾರೆಡ್ಡಿ. ಡಾ. ತಿಮ್ಮೇಗೌಡರ ಪರ ಪ್ರಮೀಳಾ ನೇಸರ್ಗಿ. ಆಶ್ಚರ್ಯ ಅಂದ್ರೆ, ಪ್ರಮೀಳಾ ನೇಸರ್ಗಿ ಆಗ ಕಾಂಗ್ರೆಸ್ ಪಕ್ಷದಲ್ಲಿದ್ದರು. ಶಾಸಕರಾಗಿದ್ದರು. ಕೋರ್ಟ್‌ನಲ್ಲಿ ತಮ್ಮದೇ ಪಕ್ಷದ ನಾಯಕನ ವಿರುದ್ಧ ವಕಾಲತ್ತು ವಹಿಸಿದ್ದರು. ಒಂದು ದಿನ ಕೋರ್ಟ್ ನಲ್ಲಿ ದೇವರಾಜ ಅರಸು ಅವರನ್ನು ಇದೇ ಪ್ರಮೀಳಾ ನೇಸರ್ಗಿಯವರು, ಕೇಸಿಗೆ ಸಂಬಂಧವೇ ಇಲ್ಲದ ಪ್ರಶ್ನೆಗಳನ್ನು ಕೇಳುತ್ತ ಸುಮಾರು ಎರಡೂವರೆ ಗಂಟೆಗಳ ಕಾಲ ಕಟಕಟೆಯಲ್ಲಿ ನಿಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿಗಳನ್ನು ಹೀಗೆ ಕಟಕಟೆಯಲ್ಲಿ ನಿಲ್ಲಿಸುವುದು ಜಡ್ಜ್ ಗಳಿಗೂ ಇಷ್ಟವಿರಲಿಲ್ಲ. ಜಡ್ಜ್‌ಗಳೆ ಮುಂದಾಗಿ ‘‘ಒಂದು ಚೇರ್ ತರಿಸಿ ಹಾಕಿಸುತ್ತೇನೆ, ದಯವಿಟ್ಟು ಕೂತ್ಕೊಳಿ’’ ಎಂದು ಹೇಳಿದರೂ ಅರಸು ಅವರು ‘‘ಇಲ್ಲ, ಎಲ್ಲರಂತೆ ನಾನೂ ಒಬ್ಬ. ನ್ಯಾಯಾಂಗಕ್ಕೆ ಗೌರವ ತೋರಬೇಕಾದ್ದು, ರೀತಿ ರಿವಾಜುಗಳನ್ನು ಪಾಲಿಸಬೇಕಾದ್ದು ನಮ್ಮ ಕರ್ತವ್ಯ. ನನಗೇನು ತೊಂದರೆ ಇಲ್ಲ’’ ಎಂದು ನಿಂತೇ ಇದ್ದರು. ನಾಯಕನಾದವನು ಸರಿ ಇರಬೇಕು, ಸಾಮಾನ್ಯರು ಆತನನ್ನು ಗಮನಿಸುತ್ತಾರೆ, ಹಿಂಬಾಲಿಸುತ್ತಾರೆ ಎನ್ನುವುದು ಅರಸು ಅವರಿಗೆ ಗೊತ್ತಿತ್ತು. ಹಾಗೆ ನೋಡಿದರೆ, ಆ ಕೇಸಿನಲ್ಲಿ ಹುರುಳಿರಲಿಲ್ಲ. ಅರಸು ಅವರಿಗೆ ನೋವು ಕೊಡಬೇಕೆಂದೇ ಎಲ್ಲರೂ ಒಂದಾಗಿದ್ದರು, ವಿನಾಕಾರಣ ಕಟಕಟೆಯಲ್ಲಿ ನಿಲ್ಲಿಸಿದ್ದರು. ನಾನು ಇದನ್ನೆಲ್ಲ ಬಹಳ ಹತ್ತಿರದಿಂದ ನೋಡಿದ್ದೆನಲ್ಲ, ಅರಸು ಸತ್ತಾಗ, ಪಾರ್ಥಿವ ಶರೀರ ನೋಡಲು ಬಂದ ಡಾ. ತಿಮ್ಮೇಗೌಡರಿಗೆ, ಆ ಕೇಸಿನ ವಿಚಾರ ಕೇಳಿದೆ. ಅದಕ್ಕವರು ‘ಏನೋ ತಪ್ಪಾಯ್ತು, ಬಿಡಪ್ಪ’ ಎಂದರು.
ವಾ.ಭಾ: ಅರಸು ಭ್ರಷ್ಟರಾಗಿದ್ದರೆ, ಷಾ ಕಮಿಷನ್ ಕೂಡ ನೇಮಕವಾಗಿತ್ತಲ್ಲ...?
ಮೂರ್ತಿ: 1979ರಲ್ಲಿ ದೇವರಾಜ ಅರಸು ಮುಖ್ಯ ಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದವರು ಎಚ್.ಡಿ. ದೇವೇಗೌಡರು. ಅರಸರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ ಎಂದು ಶಾಸನಸಭೆಯಲ್ಲಿ ದಾಖಲೆಗಳನ್ನಿಟ್ಟುಕೊಂಡು ಅರಸರ ವಿರುದ್ಧ ವಾಗ್ದಾಳಿ ನಡೆಸಿ, ಇಕ್ಕಟ್ಟಿಗೆ ಸಿಲುಕಿಸಿದ್ದರು. ಪ್ರತಿದಿನ ಮಾಧ್ಯಮ ಗಳಲ್ಲಿ ಅದೇ ಹೆಡ್ ಲೈನ್ ನ್ಯೂಸ್. ಅರಸರೇನು ವಿಚಲಿತರಾಗಿರಲಿಲ್ಲ. ಆದರೆ ಇಂದಿರಾ ವಿರುದ್ಧ ಸೆಟೆದು ನಿಂತಿದ್ದು, ತಮ್ಮ ಪಕ್ಷದವರೇ ಅರಸು ವಿರುದ್ಧ ಗುಂಪುಗೂಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿ ಸಲು ಸಂಚು ರೂಪಿಸುತ್ತಿದ್ದುದು ಕಂಗೆಡಿಸಿತ್ತು. ಆ ಸಂದರ್ಭದಲ್ಲಿ ನಾನು, ‘‘ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಮೀರ್ ಇಕ್ಬಾಲ್ ಹುಸೈನ್‌ರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ, ದೇವೇಗೌಡರು ನೀಡಿರುವ ದಾಖಲೆಗಳನ್ನೇ ಆಯೋಗಕ್ಕೆ ನೀಡಿ ತನಿಖೆ ಮಾಡಿಸೋಣ’’ ಎಂದೆ. ಅರಸು ಒಪ್ಪಿದರು. ಸಮಿತಿ ನೇಮಿಸಿ, ತನಿಖೆಗೂ ಸೂಚಿಸಿದರು. ಆದರೆ 1980ರಲ್ಲಿ ಲೋಕಸಭಾ ಚುನಾವಣೆ ನಡೆದು, ಅರಸರ ಕಾಂಗ್ರೆಸ್ ಸೋತು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಳಗಿಳಿದಾಗ, ವಿರೋಧಪಕ್ಷದವರು ಜಾಗೃತರಾದರು. ಆಗ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರದಲ್ಲಿತ್ತು. ಪ್ರಧಾನಿ ಮೊರಾರ್ಜಿ ದೇಸಾಯಿಯವರ ಮೇಲೆ ಒತ್ತಡ ತಂದ ದೇವೇಗೌಡ, ರಾಮಕೃಷ್ಣ ಹೆಗಡೆ ಮತ್ತು ಬೊಮ್ಮಾಯಿ, ಅರಸು ಕಾಲದ ಭ್ರಷ್ಟಾಚಾರವನ್ನು ತನಿಖೆ ಮಾಡಲು ಷಾ ಕಮಿಷನ್ ನೇಮಕವಾಗುವಂತೆ ನೋಡಿಕೊಂಡರು. ಷಾ ಕಮಿಷನ್ ಮುಂದೆ, ಅರಸು ಅವರ ಆಡಳಿತದ ಕಾಲದಲ್ಲಿದ್ದ ಪೊಲೀಸ್ ಕಮಿಷನರ್ ಚಂದ್ರಶೇಖರ್, ಹೋಮ್ ಸೆಕ್ರೆಟರಿ ಬಿ.ಎಸ್.ಹನುಮಾನ್, ಇಂಟಲಿಜೆನ್ಸ್ ಡಿಐಜಿ ಬಿ.ಎನ್.ಗರುಡಾಚಾರ್ ಹಾಜರಾಗಿ ಅರಸು ಸರಕಾರವನ್ನು ಸಮರ್ಥಿಸಿಕೊಂಡರು, ಅರಸು ಅವರನ್ನು ಬೆಂಬಲಿಸಿ ಸಾಕ್ಷಿ ನುಡಿದರು. ಕೊನೆಗೂ ಅರಸು ಅವರನ್ನು ಭ್ರಷ್ಟಾಚಾರದ ಕೇಸಿನಲ್ಲಿ ಸಿಲುಕಿಸಲಾಗದೆ, ಷಾ ಕಮಿಷನ್ ತನಿಖೆ ಕೂಡ ತಣ್ಣಗಾಯಿತು. ಅರಸು ವೈಯಕ್ತಿಕವಾಗಿ ಭ್ರಷ್ಟರಾಗಿರಲಿಲ್ಲ. ಶಾಸಕರನ್ನು ಸಾಕಲು, ಹೈಕಮಾಂಡಿಗೆ ಕಪ್ಪಕಾಣಿಕೆ ಸಲ್ಲಿಸಲು ಭ್ರಷ್ಟರಾಗಬೇಕಾಯಿತು. ನಿಮಗೆ ಗೊತ್ತಿಲ್ಲ, ಅರಸು ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ, ಅವರನ್ನು ನೋಡಲು ಯಾರೂ ಬರಲಿಲ್ಲ. ಅರಸು ಅವರ ಆರ್ಥಿಕ ಪರಿಸ್ಥಿತಿ ಬಲ್ಲ ಎಂ.ಎಸ್. ರಾಮಯ್ಯನವರು, ಅವರನ್ನು ಭೇಟಿ ಮಾಡಿ, ‘‘ನಿಮ್ಮ ಖರ್ಚಿಗೆ ದಿನಕ್ಕೆ ಒಂದು ಸಾವಿರ ಕೊಡುತ್ತೇನೆ, ಬೇಡ ಎನ್ನಬೇಡಿ’’ ಎಂದು ವಿನಂತಿಸಿಕೊಂಡರು. ಹೇಳಿದಂತೆ ಮಾಡಿದರು. ಇನ್ನು ಅರಸು ಅವರು ನಿಧನರಾದಾಗ; ಅವರ ಮನೆಯ ಆಳುಗಳಿಗೆ, ಕಾರಿಗೆ ಪೆಟ್ರೋಲ್ ಹಾಕಿಸುತ್ತಿದ್ದ ಬಂಕ್‌ಗೆ, ದಿಲ್ಲಿಗೆ ಹೋಗಲು ಟಿಕೆಟ್ ಬುಕ್ ಮಾಡುತ್ತಿದ್ದ ಏರ್‌ಲೈನ್ಸ್ ಸಂಸ್ಥೆಗೆ ಮೂರು ತಿಂಗಳ ಬಾಕಿ ಉಳಿಸಿಕೊಂಡಿದ್ದರು. ಅದು ಗೊತ್ತಿದ್ದ ಎಂ.ಎಸ್. ರಾಮಯ್ಯನವರು ಆ ಬಾಕಿ ಹಣ, ಒಂದು ಲಕ್ಷದ ಮೂವತ್ತು ಸಾವಿರ ರೂ.ಗಳನ್ನು ಲೆಕ್ಕ ಹಾಕಿಸಿ, ಅವತ್ತೇ ಚುಕ್ತಾ ಮಾಡಿದರು. ಅರಸು, ರಾಜ್ಯದ ಬಡವರನ್ನು ಋಣಮುಕ್ತರನ್ನಾಗಿ ಮಾಡಿದರೆ, ಅರಸರನ್ನು ಎಂ.ಎಸ್. ರಾಮಯ್ಯನವರು ಋಣಮುಕ್ತರನ್ನಾಗಿಸಿದರು.
ವಾ.ಭಾ: ಅರಸು ಅವರ ಹವ್ಯಾಸಗಳು, ಆಸಕ್ತಿಗಳು, ಕಾಳಜಿ ಏನಿತ್ತು?
ಮೂರ್ತಿ: ಅರಸು ಅವರಿಗೆ ಸಂಗೀತ ಕೇಳೋದು ತುಂಬಾ ಇಷ್ಟ. ಯಾವುದಾದರೂ ಹಾಡನ್ನು ಗುನುಗುತ್ತಿದ್ದಾರೆ ಎಂದರೆ ಅದು ಅರಸರ ಮೂಡ್ ಚೆನ್ನಾಗಿದೆ ಅಂತ ಅರ್ಥ. ಭಾಗವತ, ಪುರಾಣ ಓದುತ್ತಿದ್ದರು. ಗಮಕದವರನ್ನು ಕರೆಸಿ ಕುಮಾರವ್ಯಾಸ ಭಾರತವನ್ನು ಹಾಡಿಸಿಕೊಳ್ಳುತ್ತಿದ್ದರು. ಒಂದು ತಿಂಗಳಿಗೆ ಒಂದು ಸಲವಾದರೂ ಗಮಕದವರನ್ನು ಕರೆಸಿ, ಹಾಡಿಸಿ, ಅದರೊಳಗಿದ್ದ ರಾಜಧರ್ಮದ ಬಗ್ಗೆ ವಿಶೇಷ ಆಸಕ್ತಿಯಿಂದ ಕೇಳುತ್ತಿದ್ದರು ಮತ್ತು ಆ ಬಗ್ಗೆ ಚರ್ಚಿಸುತ್ತಿದ್ದರು. ಬರ್ಟಂಡ್ ರಸೆಲ್, ಡಿಕನ್ಸ್, ಲೂಯಿಸ್, ಐನ್‌ಸ್ಟೇನ್ ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ಕುವೆಂಪು, ಅನಕೃ, ಕಟ್ಟೀಮನಿ, ಮಾಸ್ತಿ, ಗೊರೂರು ಅವರ ಕೃತಿಗಳನ್ನು ಓದಿಕೊಂಡಿದ್ದರು. ಇದ್ದಕ್ಕಿದ್ದಂತೆ ಮಾಸ್ತಿಯವರ ಮನೆಗೆ ಹೋಗಿಬಿಡುತ್ತಿದ್ದರು. ಒಂದು ಸಲ ಕ್ರೆಸೆಂಟ್ ರಸ್ತೆಯ ಮನೆಗೆ ಗೊರೂರು ರಾಮಸ್ವಾಮಿ ಐಯ್ಯಂಗಾರರನ್ನು ಕರೆಸಿಕೊಂಡು ಒಂದೂವರೆ ಗಂಟೆಗಳ ಕಾಲ ಮಾತನಾಡಿಸಿ, ಕಾರಿನಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದರು
ವಯಸ್ಕರ ಶಿಕ್ಷಣದ ಬಗ್ಗೆ ಬಹಳ ಆಸ್ಥೆ ಇತ್ತು. ಯುವಕರ ಬಗ್ಗೆ ಅಪಾರವಾದ ನಂಬಿಕೆ ಇತ್ತು. ಬರೀ ಹಿಂದುಳಿದ ಜಾತಿಯ ಜನರಲ್ಲ, ಎಲ್ಲ ಜಾತಿಯ ಬಡವರ ಬಗ್ಗೆ ಕಾಳಜಿ ಇತ್ತು. ರಾಷ್ಟ್ರ ನಿರ್ಮಾಣದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕಿದೆ ಎಂಬುದು ಅರಸರ ದಿಟ್ಟ ನಿಲುವಾಗಿತ್ತು.