ದೀಪಿಕಾ ಸಂಭಾವನೆ '15 ಕೋಟಿ ರೂ' !.

ಬಾಜಿರಾವ್ ಮಸ್ತಾನಿ ಚಿತ್ರದ ಯಶಸ್ಸಿನ ಲಾಭ ಪಡೆದುಕೊಂಡಿರುವ ದೀಪಿಕಾ, ತನ್ನ ಮುಂದಿನ ಎಲ್ಲ ಚಿತ್ರಗಳ ಸಂಭಾವನೆಯನ್ನು ಏಕಾಏಕಿಯಾಗಿ 15 ಕೋಟಿ ರೂ.ಗೆ ಏರಿಸಿಬಿಟ್ಟಿದ್ದಾಳೆ. ಬಾಲಿವುಡ್ ಹೀರೋಗಳ ಮಟ್ಟಿಗೆ ಹೇಳುವುದಾದರೆ, ಇದೇನು ದೊಡ್ಡ ಮೊತ್ತವಲ್ಲವಾದರೂ, ಹಿರೋಯಿನ್‌ಗಳ ವಿಷಯದಲ್ಲಿ ಇದು ಬೃಹತ್ ಮೊತ್ತವೆಂದೇ ಹೇಳಬಹುದು.
ಪಿಕು,ತಮಾಷಾ ಹಾಗೂ ಬಾಜಿರಾವ್ ಮಸ್ತಾನಿ, ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿರುವ ದೀಪಿಕಾ, ಇದೀಗ ಬಾಲಿವುಡ್‌ನ ನಂ.1 ನಟಿಯೆನಿಸಿದ್ದಾಳೆ. ಸಂಭಾವನೆಯ ವಿಷಯದಲ್ಲಿ ಬಾಲಿವುಡ್ ನಟಿಯರಿಗೆ ಭಾರೀ ತಾರತಮ್ಯ ಮಾಡಲಾಗುತ್ತಿ ದೆಯೆಂದು ಇನ್ನೋರ್ವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ, ಬೇಸರ ತೋಡಿಕೊಂಡಿದ್ದು, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ದೀಪಿಕಾ ತನ್ನ ಸಂಭಾವನೆಯನ್ನು 15 ಕೋಟಿಗೆ ಹೆಚ್ಚಿಸುವ ಮೂಲಕ , ಬಾಲಿವುಡ್‌ನಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾಳೆ. ಈ ನಡುವೆ ಕಳೆದ ವರ್ಷ ತೆರೆಕಂಡ ದೀಪಿಕಾ ಹಾಗೂ ರಣಬೀರ್ ಅಭಿನಯದ ತಮಾಷಾ ಚಿತ್ರ, ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿದ ಹಿನ್ನೆಲೆಯಲ್ಲಿ , ಇವರಿಬ್ಬರೂ ನಿರ್ಮಾಪಕರಾದ ಯುಟಿವಿ ಪ್ರೊಡಕ್ಷನ್ಸ್ ಹಾಗೂ ಸಾಜಿದ್ ನಾಡಿಯಾದ್‌ವಾಲಾ ಅವರಿಗೆ 15 ಕೋಟಿ ರೂ.ಗಳನ್ನು ಮರಳಿಸಿದ್ದಾರೆಂದು ಮುಂಬೈನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ತಮಾಶಾ ಗೆ ವಿಮರ್ಶಕರಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದರೂ, ಚಿತ್ರವು ಬಾಕ್ಸ್ ಆಫೀಸಿನಲ್ಲಿ ನಿರೀಕ್ಷಿತ ಗೆಲುವು ಕಾಣಲಿಲ್ಲ. ನಿರ್ಮಾಪಕರಿಗೆ ನಷ್ಟ ಉಂಟಾಗಬಾರದೆಂಬ ದೃಷ್ಟಿಯಿಂದ ರಣಬೀರ್ ಕಪೂರ್ 10 ಕೋಟಿ ರೂ. ಹಾಗೂ ದೀಪಿಕಾ 5 ಕೋಟಿ ರೂ.ಗಳನ್ನು ಮರಳಿಸಿದ್ದಾರೆನ್ನಲಾಗಿದೆ.





