ಯಾರಿದ್ದ!

ಹಗ್ಗದ ಚೀಲದಲ್ಲಿ
ಕಿತಾಬುಗಳ ತುಂಬಿಕೊಂಡು
ಮದ್ರಸದತ್ತ ಓಡುವಾಗ
ಕಲ್ಲು ತಾಗಿ ಬಿದ್ದವನ
ಓಡಿ ಬಂದು ಎತ್ತಿ
ರಕ್ತ ಸೋರುವ ಹೆಬ್ಬೆರಳಿಗೆ
ಬಟ್ಟೆ ಕಟ್ಟಿ ಕೊಟ್ಟು
ಕಾಳಜಿಯ ನುಡಿಗಳನಾಡುವಾಗ
ಉಮೇಶನೊಳಗೆ ಯಾರಿದ್ದ!
ಮಕ್ಕಳಾಟಿಕೆಯಲ್ಲಿ
ಐತಪ್ಪ ಅಜ್ಜನನ್ನು
ಹಿಯಾಳಿಸಿದ್ದಕ್ಕೆ
ಬಾಸುಂಡೆ ಬರುವಂತೆ ಹೊಡೆದು
ಬುದ್ದಿ ಹೇಳುವಾಗ ಮದ್ರಸದ
ಉಸ್ತಾದರೊಳಗೆ ಯಾರಿದ್ದ!
ಕೋಳಿ ಅಂಕವಾಡಿದ್ದಕ್ಕೆ
ಶೇಂದಿ ಶೇಖರಿಸಿಟ್ಟಿದ್ದಕ್ಕೆ
ಬೆನ್ನತ್ತುವ ಪೊಲೀಸರ ಕಂಡು
ಹೆದರಿ ಓಡುವ
ಅಕ್ಕ ಪಕ್ಕದ ‘ಮಾನವ’ರಿಗೆ
ಅಟ್ಟದಲ್ಲಿ ಅಡಗಿಕೊಳ್ಳಲು
ಜಾಗ ಬಿಟ್ಟುಕೊಡುವಾಗ
ನನ್ನಪ್ಪನೊಳಗೆ ಯಾರಿದ್ದ!
ಕೋಮು ದಳ್ಳುರಿಗೆ ಹೆಣಗಳುರುಳುವಾಗ
ಮಿಡಿತಗಳ ಕ್ಷಾಮಕ್ಕೆ
ಮನೆಗಳುರುಳುವಾಗ
ದಾನವರ ಹೀನ ಕೃತ್ಯಗಳಿಗೆ
ಊರಿಗೂರೇ ಗೋಳಾಡುವಾಗ
ಮನೆ ಮೂಲೆಯಲ್ಲಿ ಕೂತು
ಅವಸ್ಥೆಯ ನೆನೆದು
ಚಿಂತೆಗೆ ಬೀಳುವ
ಉಮ್ಮನೊಳಗೆ ಯಾರಿದ್ದಾನೆ!
ಪಕ್ಕಾ ಹೇಳಬಲ್ಲೆ,
ಅವರೊಳಗೆಲ್ಲ
ವಿಶ್ವಮಾನವನಿದ್ದ!
ಅರ್ಥಾತ್ ಪುಟ್ಟಪ್ಪಜ್ಜಯ್ಯ!
ಮಿಡಿವ ಹೃದಯಗಳು
ಮಾನವೀಯ ಮೌಲ್ಯಗಳು
ಜಗದೊಂದಿಗಿರುವ ತನಕ
ಪುಟ್ಟಪ್ಪಜ್ಜಯ್ಯ ಇದ್ದೇ ಇರುತ್ತಾನೆ!
ಕ್ಷಣ ಕ್ಷಣವೂ ಬೆಳೆಯುತ್ತಾ
ಮನುಜ ಮತದ ಬಯಲಲ್ಲಿ
ಹೊಳೆಯುತ್ತಿರುತ್ತಾನೆ!







