ಜೆಮಿನಿ ಅರೇಬಿಯನ್ಸ್ ತಂಡಕ್ಕೆ ಸೆಹ್ವಾಗ್ ನಾಯಕ

ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್
ದುಬೈ, ಜ.11: ಮುಂಬರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‌ನಲ್ಲಿ (ಎಂಸಿಎಲ್)ಭಾಗವಹಿಸಲಿರುವ ಜೆಮಿನಿ ಅರೇಬಿಯನ್ಸ್ ತಂಡದ ನಾಯಕ ಹಾಗೂ ತಂಡದ ನಿರ್ದೇಶಕರಾಗಿ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನೇಮಕಗೊಂಡಿದ್ದಾರೆ.
ವಿಶ್ವದ ವಿವಿಧ ಭಾಗದ ಆಟಗಾರರು ದುಬೈಗೆ ಆಗಮಿಸಿ ಎಂಸಿಎಲ್‌ನಲ್ಲಿ ಭಾಗವಹಿಸಲಿರುವ ತಂಡದ ಲಾಂಛನ ಹಾಗೂ ತಂಡದ ಜರ್ಸಿಯನ್ನು ಅನಾವರಣಗೊಳಿಸಿದರು.
‘‘ಎಂಸಿಎಲ್‌ನ್ನು ಯಶಸ್ವಿಗೊಳಿಸಲು ಎಲ್ಲ ಕ್ರಿಕೆಟಿಗರು ಹೆಚ್ಚಿನ ಉತ್ಸಾಹ ತೋರುತ್ತಿದ್ದು, ನಾವು ಈ ಉತ್ಸಾಹದಲ್ಲೇ ಕ್ರಿಕೆಟ್ ಅಂಗಳಕ್ಕೆ ಇಳಿದು ಮುಂಬರುವ ಎಂಸಿಎಲ್‌ನ್ನು ಯಶಸ್ಸುಗೊಳಿಸಲು ಯತ್ನಿಸಲಿದ್ದೇವೆ’’ ಎಂದು ತಂಡದ ಮಾಲಕರು ಹಾಗೂ ಸಿಇಒ ನಳಿನ್ ಖೈತಾನ್ ಹೇಳಿದ್ದಾರೆ.
ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೆಮಿನಿ ಅರೇಬಿಯನ್ ತಂಡದ ಸ್ಟಾರ್ ಆಟಗಾರರಾದ ಸೆಹ್ವಾಗ್, ಸಕ್ಲೇನ್ ಮುಶ್ತಾಕ್, ರಿಚರ್ಡ್ ಲೆವಿ, ಪಾಲ್ ಹ್ಯಾರಿಸ್, ಜಾಕ್ ರುಡಾಲ್ಫ್, ಗ್ರಹಾಂ ಒನಿಯನ್ಸ್ ಹಾಗೂ ಸಕೀಬ್ ಅಲಿ ಅವರನ್ನು ಹುರಿದುಂಬಿಸಿದರು.
‘‘ನಮ್ಮ ತಂಡದ ನಾಯಕ ಹಾಗೂ ನಿರ್ದೇಶಕರನ್ನಾಗಿ ವೀರೇಂದ್ರ ಸೆಹ್ವಾಗ್‌ರನ್ನು ನೇಮಕ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಅವರ ಅನುಭವ ಹಾಗೂ ಜ್ಞಾನ ನಮ್ಮ ತಂಡಕ್ಕೆ ನೆರವಿಗೆ ಬರಲಿದೆ. ಸೆಹ್ವಾಗ್‌ರನ್ನು ನಾಯಕರನ್ನಾಗಿ ನೇಮಕ ಮಾಡಬೇಕೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿತ್ತು’’ ಎಂದು ಜಿಮಿನಿ ಅರೇಬಿಯನ್ ತಂಡದ ಮೇಧಾ ಅಹ್ಲುವಾಲಿಯ ಹೇಳಿದ್ದಾರೆ.
ಏನಿದು ಎಂಸಿಎಲ್:
ಕ್ರಿಕೆಟ್‌ನ ದಿಗ್ಗಜ ಆಟಗಾರರನ್ನು ಟ್ವೆಂಟಿ-20 ಟೂರ್ನಿಯ ಮೂಲಕ ಒಂದೆಡೆ ಸೇರಿಸುವುದು ಎಂಸಿಎಲ್‌ನ ಮುಖ್ಯ ಧ್ಯೇಯ. ಎಂಸಿಎಲ್‌ನ ಆರು ಫ್ರಾಂಚೈಸಿಗಳಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಸುಮಾರು 250 ಆಟಗಾರರು ಭಾಗವಹಿಸಲಿದ್ದಾರೆ.
ಎಂಸಿಎಲ್ ಟೂರ್ನಿಯು ಜ.28 ರಿಂದ ಫೆ.13ರ ತನಕ ದುಬೈ ಹಾಗೂ ಶಾರ್ಜಾದಲ್ಲಿ ನಡೆಯಲಿದೆ.
ಎಂಸಿಎಲ್‌ನಲ್ಲಿ ಕುಮಾರ ಸಂಗಕ್ಕರ, ಶಿವನಾರಾಯಣ್ ಚಂದರ್‌ಪಾಲ್, ಬ್ರಾಡ್ ಹಾಡ್ಜ್, ಜಸ್ಟಿನ್ ಕೆಂಪ್, ಮುತ್ತಯ್ಯ ಮುರಳೀಧರನ್, ಕೇಲ್ ಮಿಲ್ಸ್, ರಾನಾ ನಾವೇದ್ ವುಲ್ ಹಸನ್ ಹಾಗೂ ಆಶೀಷ್ ಬಗಾಲ್ ಕೂಡ ಭಾಗವಹಿಸಲಿದ್ದಾರೆ.







