ನಿಷೇಧ ವಿರುದ್ಧ ಮೇಲ್ಮನವಿಗೆ ಬ್ಲಾಟರ್ ನಿರ್ಧಾರ

ಪ್ಯಾರಿಸ್, ಜ.11: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಫಿಫಾದ ಎಥಿಕ್ಸ್ ಸಮಿತಿಯಿಂದ 8 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಫಿಫಾದ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಬ್ಲಾಟರ್ ವಕೀಲರು ರವಿವಾರ ಸ್ಪಷ್ಪಪಡಿಸಿದ್ದಾರೆ.
‘‘ನಾವು ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೇವೆ’’ ಎಂದು ಬ್ಲಾಟರ್ ಅವರ ಅಮೆರಿಕ ಮೂಲದ ಅಟಾರ್ನಿ ಜನರಲ್ ರಿಚರ್ಡ್ ಕಲ್ಲೆನ್ ಸುದ್ದಿಸಂಸ್ಥೆಗೆ ಇ-ಮೇಲ್ ಮೂಲಕ ದೃಢಪಡಿಸಿದ್ದಾರೆ.
8 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಬ್ಲಾಟರ್ ಹಾಗೂ ಯುಇಎಫ್‌ಎ ಅಧ್ಯಕ್ಷ ಮೈಕಲ್ ಪ್ಲಾಟಿನಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಫಿಫಾದ ನೀತಿ ಸಮಿತಿ ಶನಿವಾರ ಹೇಳಿಕೆ ನೀಡಿತ್ತು.
ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪ್ಲಾಟಿನಿ ಅವರ ವಕೀಲರೂ ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್‌ನಲ್ಲಿ ಫಿಫಾದ ಎಥಿಕ್ಸ್ ಕಮಿಟಿ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ಬ್ಲಾಟರ್ ಹಾಗೂ ಪ್ಲಾಟಿನಿಗೆ 8 ವರ್ಷಗಳ ಕಾಲ ನಿಷೇಧ ವಿಧಿಸಿದ್ದಲ್ಲದೆ, 1998 ರಿಂದ ಫಿಫಾ ಅಧ್ಯಕ್ಷರಾಗಿದ್ದ ಬ್ಲಾಟರ್‌ಗೆ 50,000 ಸ್ವಿಸ್ ಫ್ರಾನ್ಸ್ ಹಾಗೂ ಫಿಫಾ ಉಪಾಧ್ಯಕ್ಷ ಪ್ಲಾಟಿನಿಗೆ 80,000 ಸ್ವಿಸ್ ಫ್ರಾನ್ಸ್ ದಂಡ ವಿಧಿಸಿತ್ತು.





