ಖರ್ಗೆಗೆ ಅಗೌರವ: ಸ್ಪೀಕರ್ ಕಿಡಿ
ಬೆಂಗಳೂರು, ಜ. 11: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಧಾನಸೌಧಕ್ಕೆ ಆಗಮಿಸಿದರೆ ಮುಖ್ಯಮಂತ್ರಿ ಮಾತ್ರವಲ್ಲ, ಹೆಣವೂ ಎದ್ದು ನಿಲ್ಲಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ರಾಜ್ಯ ಸರಕಾರವನ್ನು ತಿವಿದಿದ್ದಾರೆ.
ಸೋಮವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಂಸದೀಯ ಸಮಿತಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯ ಸಂಬಂಧದ ಸಭೆ ರದ್ದಾದ ವಿಚಾರಕ್ಕೆ ಸಂಬಂಧಿಸಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಲೋಕಸಭೆಯ ಉಪಾಧ್ಯಕ್ಷ ತಂಬಿದೊರೈ ಅಧ್ಯಕ್ಷತೆಯಲ್ಲಿ ಸಭೆ ನಿಗಧಿಯಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಶಿಷ್ಟಾಚಾರ ಪಾಲಿಸಿಲ್ಲ, ಸಮಿತಿಗೆ ಗೌರವ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಖರ್ಗೆ, ಸಿದ್ಧರಾಮಯ್ಯನವರಿಗಿಂತ ಮೇಲಿನವರು. ಶಿಷ್ಟಾಚಾರ ಪಾಲಿಸುವುದು ಅಧಿಕಾರಿಗಳ ಕರ್ತವ್ಯ. ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಹೋಗಲೇಬೇಕೆಂದಿಲ್ಲ ಎಂದ ಕಾಗೋಡು ತಿಮ್ಮಪ್ಪ, ಸಂಸದೀಯ ಸಮಿತಿಯ ಸಭೆಯ ಸಂಬಂಧ ತನ್ನ ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಬ್ರಹ್ಮಾಂಡ ಬುದ್ಧಿವಂತ: ಹಿರಿಯ ಐಎಎಸ್ ಅಧಿಕಾರಿ ಮತ್ತು ಬ್ರಹ್ಮಾಂಡ ಬುದ್ಧಿವಂತರಾದ ಮುಖ್ಯ ಕಾರ್ಯದರ್ಶಿ ಏಕೆ ಹೀಗೆ ಮಾಡಿಕೊಂಡರೋ ತಿಳಿಯದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಗೋಡು ತಿಮ್ಮಪ್ಪ ಲೇವಡಿ ಮಾಡಿದರು.
ವಿದೇಶಿ ಪ್ರವಾಸ ರದ್ದು: ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿಯ ಹಿನ್ನೆಲೆ ಯಲ್ಲಿ ಶಾಸಕರು, ಅಧಿಕಾರಿಗಳು ಕೈಗೊಳ್ಳುವ ವಿದೇಶ ಪ್ರವಾಸ ತಡೆಯಬೇಕು. ಒಂದು ವೇಳೆ ಹೋಗಲೇಬೇಕಾದರೆ ಆ ಬಗ್ಗೆ ಪರಿಶೀಲಿಸಿ ತೀರ್ಮಾನಿಸಬೇಕೆಂದು ತಿಮ್ಮಪ್ಪ, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿಗೆ ನಿರ್ದೇಶನ ನೀಡುವೆ ಎಂದರು.





