ಬಾಲೊಟೆಲ್ಲಿ ಕುಚೇಷ್ಟೆ ಬಿಚ್ಚಿಟ್ಟ ಮಾಜಿ ಸಹ ಆಟಗಾರ

ಮಿಲನ್, ಜ.11: ಸದಾ ಕುಚೇಷ್ಠೆಗಳಿಂದ ಸುದ್ದಿಯಲ್ಲಿರುವ ಇಟಲಿಯ ಸ್ಟ್ರೈಕರ್ ಮರಿಯೊ ಬಾಲೊಟೆಲ್ಲಿ ಇಂಟರ್ ಮಿಲನ್ ಕ್ಲಬ್‌ನಲ್ಲಿ ಆಡುತ್ತಿದ್ದಾಗ ಸಹ ಆಟಗಾರರ ಬೂಟ್‌ಗಳ ಮೇಲೆ ಮೂತ್ರ ವಿಸರ್ಜಿಸುತ್ತಿದ್ದರು ಎಂಬ ಸಂಗತಿ ಇದೀಗ ಬಯಲಾಗಿದೆ.
ಬಾಲೊಟೆಲ್ಲಿ ಅವರ ಮಾಜಿ ಸಹ ಆಟಗಾರ, ಇಂಟರ್ ಮಿಲನ್‌ನ ಮಾಜಿ ಮಿಡ್‌ಫೀಲ್ಡರ್ ಕೆರ್ಲೊನ್ ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿದರು. ಬಾಲೊಟೆಲ್ಲಿ ಹಾಗೂ ಕೆರ್ಲಾನ್ 2008 ರಿಂದ 2010ರ ತನಕ ಮಿಲನ್ ತಂಡವನ್ನು ಪ್ರತಿನಿಧಿಸಿದ್ದರು.
‘‘ಬಾಲೊಟೆಲ್ಲಿ ಉತ್ತಮ ಆಟಗಾರ, ಒಳ್ಳೆಯ ವ್ಯಕ್ತಿ. ಆದರೆ, ಅವರು ಮೈದಾನದ ಹೊರಗೆ ನಂಬಲಸಾಧ್ಯವಾದ ಕುಚೇಷ್ಟೆ ನಡೆಸುತ್ತಿದ್ದರು. ಫುಟ್ಬಾಲ್ ಪ್ರಾಕ್ಟೀಸ್ ಸ್ಥಳಕ್ಕೆ ಎಲ್ಲರಿಗಿಂತ ಮೊದಲು ತೆರಳುತ್ತಿದ್ದ ಅವರು ಸಹ ಆಟಗಾರರ ಬೂಟಿನ ಮೇಲೆ ಮೂತ್ರ ವಿಸರ್ಜಿಸುವ ಅಭ್ಯಾಸ ಇಟ್ಟುಕೊಂಡಿದ್ದರು. ಈ ಕುಚೇಷ್ಠೆಗೆ ಅವರು ಎಂದಿಗೂ ಸಹ ಆಟಗಾರರಲ್ಲಿ ಕ್ಷಮೆ ಕೋರಿರಲಿಲ್ಲ’’ ಎಂದು ಗೋಲ್ ಡಾಟ್‌ಕಾಮ್‌ಗೆ ಕೆರ್ಲಾನ್ ತಿಳಿಸಿದ್ದಾರೆ.
ಬೆಲೊಟೆಲ್ಲಿ ಸದಾ ತಲೆಹರಟೆ ವರ್ತನೆಯ ಮೂಲಕ ಸುದ್ದಿಯಾಗುತ್ತಿರುತ್ತಾರೆ. 2011ರಲ್ಲಿ ಮ್ಯಾಂಚೆಸ್ಟರ್ ಸಿಟಿಯಲ್ಲಿದ್ದಾಗ 3 ಮಿಲಿಯನ್ ಪೌಂಡ್ ವೌಲ್ಯದ ತನ್ನ ಬಂಗ್ಲೆಯಲ್ಲಿ ಸುಡುಮದ್ದುಗಳನ್ನು ಸಿಡಿಸಿದ್ದರಿಂದ 400,000 ಪೌಂಡ್ ನಷ್ಟ ಅನುಭವಿಸಿದ್ದರು. ಬಂಗ್ಲೆಯ ಬೆಂಕಿ ನಂದಿಸಲು 10 ಮಂದಿ ಅಗ್ನಿಶಾಮಕ ದಳದವರು ಭಾರೀ ಶ್ರಮಪಟ್ಟಿದ್ದರು.
ಬೊಲೊಟೆಲ್ಲಿ 2011ರ ಎಪ್ರಿಲ್‌ನಲ್ಲಿ 10,000 ಪೌಂಡ್ ಪಾರ್ಕಿಂಗ್ ದಂಡವನ್ನು ಪಾವತಿಸಿದ್ದರು. ಅವರ ಸ್ಪೋರ್ಟ್ಸ್ ಕಾರನ್ನು ಪೊಲೀಸರು 27 ಬಾರಿ ವಶಪಡಿಸಿಕೊಂಡಿದ್ದರು.







