ಎಲೆಕ್ಟ್ರಾನಿಕ್ಸ್ ಉದ್ಯಮ ಬೆಳವಣಿಗೆಗೆ ಆದ್ಯತೆ: ಆರ್.ವಿ.ದೇಶಪಾಂಡೆ
ಬೆಂಗಳೂರು, ಜ.11: ರಾಜ್ಯ ಸರಕಾರವು ಎಲೆಕ್ಟ್ರಾನಿಕ್ಸ್ ಉದ್ಯಮದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ‘ಇಂಡಿಯಾ ಎಲೆಕ್ಟ್ರಾನಿಕ್ಸ್ ವೀಕ್-2016’ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಪಾನ್, ಕೊರಿಯಾ, ಚೀನಾಗೆ ಹೋಲಿಸಿದರೆ ಭಾರತವು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂದರು.
ಭಾರತವು ಪ್ರಸ್ತುತ ಚೀನಾದಿಂದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. 2020ರ ವೇಳೆಗೆ ನಮ್ಮ ದೇಶವು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡುವ ಹಂತಕ್ಕೆ ಬೆಳೆಯಬೇಕು ಎಂದು ಅವರು ಆಶಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ಶೇ.8ರಷ್ಟು ಮಾತ್ರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ತನ್ನ ಪಾಲು ಹೊಂದಿದೆ. 2020ರ ವೇಳೆಗೆ ಈ ಪ್ರಮಾಣವು ಶೇ.20 ರಿಂದ 25ರಷ್ಟಿಗೆ ಹೆಚ್ಚಳವಾಗಬೇಕಿದೆ. ಇದಕ್ಕೆ ಅಗತ್ಯವಿರುವ ವಾತಾವರಣವು ನಮ್ಮ ರಾಜ್ಯದಲ್ಲಿದ್ದು, ಹೂಡಿಕೆದಾರರು ಆಸಕ್ತಿ ವಹಿಸಬೇಕು ಎಂದು ದೇಶಪಾಂಡೆ ಕರೆ ನೀಡಿದರು.
ಬೆಂಗಳೂರು ಸೇರಿದಂತೆ ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಧಾರವಾಡದಲ್ಲೂ ಎಲೆಕ್ಟ್ರಾನಿಕ್ಸ್ ಉದ್ಯಮಗಳನ್ನು ಆರಂಭಿಸಲು ಪೂರಕವಾದ ವಾತಾವರಣ ಹಾಗೂ ವಿಫುಲ ಅವಕಾಶಗಳಿವೆ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದೆ ಬರುವವರಿಗೆ ರಾಜ್ಯ ಸರಕಾರವು ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಕೌಶಲಭರಿತವಾದ ಮಾನವ ಸಂಪನ್ಮೂಲವಿದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಒದಗಿಸಲಾಗುವುದು. ಐಟಿ, ಬಿಟಿ ಮಾದರಿಯಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುವ ಅವಕಾಶ ನಮಗಿದೆ ಎಂದು ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಉದ್ಯಮಿಗಳಾದ ವಿಕ್ರಮ್‌ದೇಸಾಯಿ, ರಾಜೇಶ್ ಅಗರ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





