ನ್ಯಾ.ಅಡಿ ‘ಪದಚ್ಯುತಿ’ ಪ್ರಸ್ತಾವ; ಮುಖ್ಯ ನ್ಯಾಯಮೂರ್ತಿಗೆ ಶೀಘ್ರ ರವಾನೆ: ಕಾಗೋಡು

ಬೆಂಗಳೂರು, ಜ.11: ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ಆರೋಪಕ್ಕೆ ಗುರಿಯಾಗಿರುವ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅವರ ‘ಪದಚ್ಯುತಿ’ ಸಂಬಂಧದ ಪ್ರಸ್ತಾವನೆಯನ್ನು ವಾರದಲ್ಲೇ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರಿಗೆ ರವಾನಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನ್ಯಾ.ಸುಭಾಷ್ ಅಡಿ ‘ಪದಚ್ಯುತಿ’ಗೆ ಸಂಬಂಧಪಟ್ಟಂತೆ ಸಾಕಷ್ಟು ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ವಿಳಂಬ ನೀತಿ ಅನುಸರಿಸದೆ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುವುದು ಎಂದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ಅಡಿ ಪದಚ್ಯುತಿ ನಿರ್ಣಯ ಮಂಡಿಸಿದ್ದರು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಕ್ಕೆ ಸಂಬಂಧ ಪಟ್ಟಂತೆ ಅಗತ್ಯ ಪುರಾವೆಗಳನ್ನು ಸಂಗ್ರಹಿಸಲಾಗಿದೆ ಎಂದ ಅವರು, ನ್ಯಾ.ಅಡಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದು ನಾಳೆ ವಿಚಾರಣೆಗೆ ಬರಲಿದೆ ಎಂದರು.
ಚುನಾವಣೆ ಬಳಿಕ ಅಧಿವೇಶನ: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬಳಿಕ ವಿಧಾನ ಮಂಡಲ ಅಧಿವೇಶನ ನಡೆಸುವ ಸಾಧ್ಯತೆಗಳಿದ್ದು, ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲೇ ಜಂಟಿ ಅಧಿವೇಶನ ನಡೆಸಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ವಿಧಾನ ಮಂಡಲ ಕಾರ್ಯ ಕಲಾಪಕ್ಕೆ ಸೀಮಿತವಾಗಿ ಪ್ರತ್ಯೇಕ ಟಿ.ವಿ. ವಾಹಿನಿಯನ್ನು ಆರಂಭಿಸುವ ಸಂಬಂಧದ ಪ್ರಸ್ತಾವನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸಂಬಂಧ ಮಾಧ್ಯಮಗಳಲ್ಲಿ ವರದಿಗಳನ್ನು ತಾನು ಗಮನಿಸಿದ್ದೇನೆ ಎಂದು ಸ್ಪೀಕರ್ ಪ್ರಶ್ನೆಯೊಂದಕ್ಕೆ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.





