ಲೋಕಾಯುಕ್ತರ ನೇಮಕ; ರಾಜ್ಯ ಸರಕಾರದಿಂದ ಗೊಂದಲ: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಜ. 11: ನೂತನ ಲೋಕಾಯುಕ್ತ ನೇಮಕ ಸಂಬಂಧ ಸರಕಾರವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಯಾರೊಬ್ಬರ ಹಂಗಿಗೂ ಒಳಗಾಗದೆ ಭ್ರಷ್ಟಾಚಾರ ನಿಗ್ರಹಿಸುವ ಛಾತಿಯುಳ್ಳ ವ್ಯಕ್ತಿಯನ್ನು ಆ ಸಂಸ್ಥೆಗೆ ನಿಯೋಜಿಸಬೇಕೆಂದು ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಗೆ ಸೂಕ್ತ ವ್ಯಕ್ತಿಯನ್ನು ನೇಮಿಸುವ ಸಂಬಂಧ ರಾಜ್ಯ ಸರಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಇದೇ ವೇಳೆ ಹೇಳಿದರು. ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಿಢೀರ್ ದಾಳಿ ನಡೆಸಿ ಈ ವರೆಗೂ ವಶಪಡಿಸಿಕೊಂಡಿರುವ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ಭ್ರಷ್ಟರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕೆಂದು ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಳ್ಳಲಾದ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.





