‘ಪುತ್ರನನ್ನು ಬಲವಂತದಿಂದ ರಾಜಕೀಯಕ್ಕೆ ತರಲ್ಲ’

ಹೊಸದಿಲ್ಲಿ, ಜ.11: ನಾನು ಸಕ್ರಿಯ ರಾಜಕಾರಣದಲ್ಲಿ ಇರುವವರೆಗೆ ತನ್ನ ಪುತ್ರ ರಾಕೇಶ್‌ನನ್ನು ಬಲವಂತದಿಂದ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕೇಶ್ ಜನರ ನಡುವೆ ಜನನಾಯಕನಾಗಿ ಬೆಳೆಯಬೇಕು. ಬಲವಂತದಿಂದ ನಾನು ಆತನನ್ನು ರಾಜಕೀಯಕ್ಕೆ ಕರೆತರುವುದಿಲ್ಲ ಎಂದರು.
ನಾನು ಸಕ್ರಿಯ ರಾಜಕಾರಣದಲ್ಲಿ ಇರುವವರೆಗೆ ರಾಕೇಶ್‌ನನ್ನು ರಾಜಕೀಯಕ್ಕೆ ಕರೆ ತರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಆಸೆಯಿದೆ. ಆದರೆ, ವರುಣಾ ಕ್ಷೇತ್ರವನ್ನು ಬಿಡುತ್ತಿದ್ದೇನೆ ಎಂದು ಹೇಳಲಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಸಿದ್ಧತೆಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವರಿಷ್ಠರೊಂದಿಗೆ ಇದೊಂದು ಸೌಹಾರ್ದಯುತವಾದ ಭೇಟಿ, ಹೊಸ ವರ್ಷದ ಶುಭಕೋರಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಪಟೇಲ್‌ರನ್ನು ಭೇಟಿ ಮಾಡಿದ್ದೆ ಎಂದು ಅವರು ಹೇಳಿದರು.





