ಪಠಾಣ್‌ಕೋಟ್ ದಾಳಿ: ಪಾಕ್‌ನಿಂದ ಹಲವರ ಬಂಧನ

ಇಸ್ಲಾಮಾಬಾದ್, ಜ.11: ಭಾರತದ ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಕೆಲವರನ್ನು ಬಂಧಿಸಿದ್ದಾರೆಂದು ಗುಪ್ತಚರ ಅಧಿಕಾರಿಗಳಿಂದು ತಿಳಿಸಿದ್ದಾರೆ.
ಗುಜ್ರನ್‌ವಾಲಾ, ಝೀಲಂ ಹಾಗೂ ಬಹವಲ್ಪುರ ಜಿಲ್ಲೆಗಳಲ್ಲಿ ದಾಳಿಗಳನ್ನು ನಡೆಸಲಾಗಿದ್ದು, ಅನಿರ್ದಿಷ್ಟ ಸಂಖ್ಯೆಯ ಜನರನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಈ ಬಂಧನದ ಬಳಿಕ ಪ್ರಧಾನಿ ನವಾಝ್ ಶರೀಫ್, ಪಠಾಣ್‌ಕೋಟ್ ದಾಳಿಕಾರರಿಗೆ ಪಾಕಿಸ್ತಾನದೊಂದಿಗಿನ ಸಂಬಂಧದ ಬಗ್ಗೆ ತನಿಖೆ ನಡೆಸಲು ಉನ್ನತ ಜಂಟಿ ತನಿಖೆ ತಂಡವೊಂದರ (ಜೆಐಟಿ) ರಚನೆಗೆ ಆದೇಶ ನೀಡಿದ್ದಾರೆಂದು ಮಾಧ್ಯಮ ವರದಿಯೊಂದು ಇಂದು ತಿಳಿಸಿದೆ.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಬಗ್ಗೆ ಇಸ್ಲಾಮಾಬಾದ್‌ನ ಖಚಿತ ಕ್ರಮಕ್ಕೆ ಭಾರತವು ಮುನ್ನಡೆಯನ್ನು ಒದಗಿಸಿದ ಬಳಿಕ ಜೆಐಟಿ ರಚನೆಯ ಶರೀಫರ ನಿರ್ಧಾರ ಹೊರ ಬಿದ್ದಿದೆ. ಜ.15ರಂದು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯುವುದು ಪಾಕಿಸ್ತಾನದ ನಿರ್ಧಾರವನ್ನವಲಂಬಿಸಿದೆ.
ಶರೀಫ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯೊಂದರಲ್ಲಿ ಗುಪ್ತಚರ ಬ್ಯೂರೊ (ಐಬಿ), ಅಂತಃಸೇವಾ ಗೂಢಚರ್ಯೆ(ಐಎಸ್‌ಐ) ಹಾಗೂ ಸೇನಾ ಗೂಢಚರ್ಯೆ (ಎಂಐ) ಅಧಿಕಾರಿಗಳನ್ನೊಳಗೊಂಡ ಜೆಐಟಿ ರಚನೆಯ ನಿರ್ಧಾರ ಕೈಗೊಳ್ಳಲಾಯಿತೆಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆ.ಜ.(ನಿವೃತ್ತ) ನಾಸಿರ್ ಖಾನ್ ಜಂಜುವಾ, ಪ್ರಧಾನಿಯ ವಿದೇಶಾಂಗ ವ್ಯವಹಾರ ಸಲಹೆಗಾರ ಸರ್ತಾಜ್ ಅಝೀಝ್, ವಿದೇಶಾಂಗ ವ್ಯವಹಾರಗಳ ವಿಶೇಷ ಸಹಾಯಕ ತಾರಿಕ್ ಫಾತೆಮಿ ಹಾಗೂ ವಿತ್ತ ಸಚಿವ ಇಶಾಕ್ ದಾರ್ ಸಭೆಯಲ್ಲಿ ಹಾಜರಿದ್ದರು.
ಪ್ರಧಾನಿ ಶರೀಫ್ ಪಠಾಣ್‌ಕೋಟ್ ದಾಳಿಯ ತಳವನ್ನು ಅರಿಯದ ಸಕ್ರಿಯ ಪಾತ್ರ ವಹಿಸಿದ್ದಾರೆ. ಅವರು ಸೇನಾ ಮುಖ್ಯಸ್ಥ ಜ.ರಾಹೀಲ್ ಶರೀಫ್‌ರೊಂದಿಗೂ ಈ ವಿಷಯ ಚರ್ಚೆ ನಡೆಸಿ ಜೆಐಟಿ ರಚವೆಯ ನಿರ್ಧಾರದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆಂದು ಶರೀಫ್‌ರ ಗೃಹ ಮೂಲಗಳು ತಿಳಿಸಿವೆ.
ಪಾಕಿಸ್ತಾನ-ಭಾರತ ಸಂಬಂಧ ಮುಂದುವರಿಕೆಯಲ್ಲಿ ಈ ತನಿಖೆಯು ಶರೀಫ್‌ರ ಅಗ್ನಿ ಪರೀಕ್ಷೆಯಾಗಿದೆಯೆಂದೂ ಅವು ಹೇಳಿವೆ.