ಅಫ್ಝಲ್ ಗುರು ಪುತ್ರ ಘಾಲಿಬ್‌ಗೆ 10ನೆ ತರಗತಿಯಲ್ಲಿ ಅತ್ಯುನ್ನತ ಶ್ರೇಣಿ

ಶ್ರೀನಗರ, ಜ.11: ಸಂಸತ್ ದಾಳಿ ಪ್ರಕರಣದಲ್ಲಿ ಮೂರು ವರ್ಷಗಳ ಹಿಂದೆ ಗಲ್ಲಿಗೇರಿರುವ ಮುಹಮ್ಮದ್ ಅಫ್ಝಲ್ ಗುರುವಿನ ಪುತ್ರ ಘಾಲಿಬ್ ಗುರು ಎಂಬಾತ ಜಮ್ಮು-ಕಾಶ್ಮೀರ ಶಾಲಾ ಪರೀಕ್ಷಾ ಮಂಡಳಿ ನಡೆಸಿದ್ದ 10ನೆ ತರಗತಿಯ ಪರೀಕ್ಷೆಯಲ್ಲಿ ಶೇ.95 ಅಂಕ ಗಳಿಸಿದ್ದಾನೆ.
ಒಟ್ಟು 500 ಅಂಕಗಳಲ್ಲಿ ಘಾಲಿಬ್ 474 ಅಂಕ ಗಳಿಸಿದ್ದಾನೆಂದು ಇಂದು ಪ್ರಕಟವಾದ ಫಲಿತಾಂಶ ತಿಳಿಸಿದೆ. ಆತ ಎಲ್ಲ ವಿಷಯಗಳಲ್ಲಿ ‘ಎ’ ಗ್ರೇಡ್ ಪಡೆದಿದ್ದಾನೆ.
ಸಂಕಷ್ಟಗಳ ನಡುವೆಯೂ ಘಾಲಿಬ್ ಈ ಸಾಧನೆ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆಯ ವಿಷಯವಾಗಿದೆ.
ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ಅಪರಾಧ ಸಾಬೀತಾದ ಬಳಿಕ ಅಫ್ಝಲ್‌ನನ್ನು 2013ರ ಫೆ.9ರಂದು ಗಲ್ಲಿಗೇರಿಸಲಾಗಿತ್ತು.
ಪುಲ್ವಾಮ ಜಿಲ್ಲೆಯ ಆವಂತಿಪುರದ ಹುಡುಗನೊಬ್ಬ ಅತ್ಯಧಿಕ ಅಂಕ ಗಳಿಸಿದವನಾಗಿದ್ದಾನೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ಹುಡುಗಿಯರೇ 10ನೆ ತರಗತಿಯ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸುತ್ತಿದ್ದರು. ತಬಿಶ್ ಮಂಝಾರ್ ಖಾನ್ ಎಂಬಾತ 500ರಲ್ಲಿ 498 ಅಂಕ ಗಳಿಸಿದ್ದು, ಅನಿಸಾ ಹಲೀನ್ ಮತ್ತು ಹಿಬಾ ಇಂತಿಖಾಬ್‌ಎಂಬವರು ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನಗಳನ್ನು ಗಳಿಸಿದ್ದಾರೆ.







