ಅಮೆರಿಕ ಹಡಗಿನ ನಾವಿಕರಿಗೆ 5 ವರ್ಷ ಜೈಲು ಅಕ್ರಮ ಶಸ್ತ್ರಾಸ್ತ್ರ
ಚೆನ್ನೈ,ಜ.11: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ ಹಾಗೂ ಅನುಮತಿಯಿಲ್ಲದೆ ಭಾರತದ ಸಾಗರಪ್ರದೇಶವನ್ನು ಪ್ರವೇಶಿಸಿದ ಆರೋಪಗಳಲ್ಲಿ ಅಮೆರಿಕದ ನೌಕೆ ‘ಎಂವಿ ಸೀ ಮ್ಯಾನ್ ಗಾರ್ಡ್ ಓಹಿಯೋ’ದ 35 ಮಂದಿ ನಾವಿಕರಿಗೆ, ತೂತುಕುಡಿಯ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ನ್ಯಾಯಾಲಯದ ತೀರ್ಪನ್ನು ಪೊಂಗಲ್ ರಜಾದಿನಗಳ ಬಳಿಕ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ, ದೋಷಿಗಳ ಪರ ವಕೀಲರು ತಿಳಿಸಿದ್ದಾರೆ.
ದೋಷಿ ನಾವಿಕರಲ್ಲಿ ಎಂಟು ಮಂದಿ ಭಾರತೀಯರು, ಆರು ಮಂದಿ ಬ್ರಿಟಿಷರು ಹಾಗೂ 14 ಮಂದಿ ಎಸ್ತೋನಿಯಾದವರಾಗಿದ್ದಾರೆ. ಅವರನ್ನು ಶೀಘ್ರದಲ್ಲಿಯೇ ತೂತುಕುಡಿ ಜೈಲಿನಿಂದ, ಪುಳಲ್‌ನಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುವುದು.
ಕಡಲ್ಗಳ್ಳರ ವಿರುದ್ಧ ಆತ್ಮರಕ್ಷಣೆಗಾಗಿ ಈ ಆಯುಧಗಳನ್ನು ತಾವು ಹೊಂದಿದ್ದೇವೆಂಬ ಆರೋಪಿಗಳ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಎಲ್ಲ 35 ಮಂದಿ ನಾವಿಕರಿಗೂ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆಯ ಜೊತೆಗೆ ತಲಾ 3 ಸಾವಿರ ರೂ. ದಂಡವನ್ನೂ ವಿಧಿಸಿದೆ. ಆದರೆ ತೂತುಕುಡಿ ಬಂದರಿನ ಸಮೀಪ ಹಡಗು ನಿಂತಿದ್ದಾಗ, ಅದಕ್ಕೆ ಇಂಧನವನ್ನು ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದ್ದ ಎಂಟು ಮಂದಿಯನ್ನು ದೋಷಮುಕ್ತಗೊಳಿಸಿದೆ.
ಹಡಗಿನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದು, ಅವು ಸೂಕ್ತವಾದ ದಾಖಲೆಪತ್ರಗಳನ್ನು ಅಥವಾ ಪರವಾನಿಗೆಯನ್ನು ಹೊಂದಿರಲಿಲ್ಲವೆಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಕುಮಾರ್ ತಿಳಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಆರೋಪಿಗಳ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಟರ್‌ಗಳು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಆದರೆ ಸುಪ್ರೀಂಕೋರ್ಟ್, ಆರೋಪಿಗಳ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿಯೇ ನಡೆಸುವಂತೆ ತೀರ್ಪು ನೀಡಿತ್ತೆಂದು ಶಿವಕುಮಾರ್ ಹೇಳಿದರು.
ಸಿಯೆರಾ ಲಿಯೋನ್‌ನ ಧ್ವಜ ಹೊಂದಿದ್ದ, ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ, 2013ರ ಅಕ್ಟೋಬರ್‌ನಲ್ಲಿ ತೂತುಕುಡಿ ಬಂದರಿನಿಂದ 15 ನಾಟಿಕಲ್ ಮೈಲು ದೂರದ ಸಾಗರಪ್ರದೇಶದಲ್ಲಿ ಪತ್ತೆಯಾಗಿತ್ತು. ನೌಕಾಯಾನ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಅಮೆರಿಕ ಮೂಲದ ಅಡ್ವಾನ್‌ಫೋರ್ಟ್, ಈ ಹಡಗಿನ ಮಾಲಕತ್ವ್ನ ಹೊಂದಿದೆ.





