ಬದಿಯಡ್ಕ: ಕಳವು ಆರೋಪಿ ಸೆರೆ

ಮಂಜೇಶ್ವರ, ಜ.11: ಬದಿಯಡ್ಕದ ಮೊಬೈಲ್ ಅಂಗಡಿಯೊಂದರಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನೆಕ್ರಾಜೆ ಚೆನ್ನಡ್ಕ ಮುಹಮ್ಮದ್ ಸುಹೈಲ್ ಯಾನೆ ಸುಹೈಲ್ ಝುಬೈರ್ (27) ಎಂಬಾತನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಕಳವು ಮಾಡಿದ ಎರಡು ಮೊಬೈಲ್ ಹಾಗೂ 5,700 ರೂ. ವಶಪಡಿಸಲಾಗಿದೆ. ಈತನಿಗೆ ನೆರವು ನೀಡಿದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳವಿಗೆ ಬಳಸಿದ ಕಬ್ಬಿಣದ ಸರಳು ಪತ್ತೆಯಾಗಿದೆ. ಜ.1 ರಂದು ರಾತ್ರಿ ಬದಿಯಡ್ಕ ಜಂಕ್ಷನ್ ಬಳಿಯ ವಳಮನೆ ರತೀಶ್‌ರ ಮೊಬೈಲ್ ಅಂಗಡಿಯಿಂದ ಶಟರ್ ಮುರಿದು 15 ಹೊಸ ಮೊಬೈಲ್, 15 ಹಳೆ ಮೊಬೈಲ್, ರೀಚಾರ್ಜ್ ಕೂಪನ್‌ಗಳು, 500 ರೂ. ನಗದು ಕಳವು ಮಾಡಲಾಗಿತ್ತು. ಈತ ಜಿಲ್ಲೆಯಲ್ಲಿ 8 ಹಾಗೂ ಕರ್ನಾಟಕದಲ್ಲಿ ಪೆಟ್ರೋಲ್ ಪಂಪ್, ಚಿನ್ನದಂಗಡಿ ಸಹಿತ 5 ಕಳವು ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಬದಿಯಡ್ಕ ಪೆರ್ಮುಖ ಮನೆಯೊಂದರಿಂದ 9 ಪವನ್ ಚಿನ್ನಾಭರಣ ಹಾಗೂ 6,000 ರೂ. ನಗದು, ಪೆರ್ಲ ನವ್ಯ ಜ್ಯುವೆಲ್ಲರಿಯಿಂದ 1 ಕಿಲೋ ಬೆಳ್ಳಿ, ತಲಾ 2 ಪವನಿನ ಎರಡು ಚಿನ್ನದ ಬಳೆಗಳನ್ನು ಕಳವುಗೈದ ಆರೋಪಿಯಾಗಿದ್ದಾನೆ. ನೆಲ್ಲಿಕುಂಜೆ ಮನೆಯೊಂದರಿಂದ 10 ಪವನ್ ಚಿನ್ನಾಭರಣ, 1 ಮೊಬೈಲ್, ಬಾರಡ್ಕದ ಮನೆಯೊಂದರಿಂದ 3,000 ರೂ, ಉಳಿಯತ್ತಡ್ಕದಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಮೋಟಾರ್ ಬೈಕ್‌ನಲ್ಲಿ ಬಂದು 14 ಗ್ರಾಂ ಚಿನ್ನದ ಸರ ಸೆಳೆದು ಪರಾರಿಯಾದ ಘಟನೆಯಲ್ಲಿ ಆರೋಪಿಯಾಗಿದ್ದಾನೆ. ವಿದ್ಯಾನಗರದಲ್ಲಿ ಮಹಿಳೆಯ ಕತ್ತಿನಿಂದ 2.5 ಪವನ್ ಚಿನ್ನಾಭರಣ, ಇರಿಯಣ್ಣಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯ ಕತ್ತಿನಿಂದ 1.5 ಪವನಿನ ಚಿನ್ನಾಭರಣ ಸೆಳೆದು ಪರಾರಿಯಾದ ಘಟನೆಯಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.





